ರಾಯರು ಕರುಣಾಮಯಿಗಳು, ಅವರಲ್ಲಿ ಶರಣು ಹೋಗಿ ಭಕ್ತಿಯಿಂದ ಬೇಡಿದರೆ ನಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುವವು ಎಂದು ಎಲ್ಲಾ ಭಕ್ತರಿಗೆ ತಿಳಿದ ವಿಷಯ, ಆದರೇ ಗುರು ಶ್ರೀಶವಿಠಲರು
“ದೃಷ್ಟಿಯಿಂದಲಿ ನೋಡೆ ಅನೇಕ ಜನ್ಮದ ಪಾಪ,
ಬಿಟ್ಟು ಪೋಪವು ಕ್ಷಣದೊಳು” ಎಂದು ಹೇಳುತ್ತಾರೆ,
ಭಕ್ತಿಯಿಂದ ರಾಯರ ಬೃಂದಾವನವನ್ನು ನೋಡಿದರೆ ಸಾಕು ಜನ್ಮ ಜನ್ಮಗಳಲ್ಲಿ ಬಂದ ಪಾಪವು ಬಿಟ್ಟು ಹೋಗುತ್ತವೆ.
“ಹರಿಯು ಭಕುತರ ಪೊರೆದ ತೆರದಲಿ
ಗುರುವೆ ನಿನ್ನಯ ಭಕುತ ಜನರನು
ಧರೆಯ ತಳದಲಿ ಪೊರೆಯೊಗೋಸುಗ ನಿನ್ನ ಅವತಾರ”
ಎಂದು ಗುರುಜಗನ್ನಾಥ ದಾಸರು ಹೇಳಿದ ಹಾಗೇ, ಹೀಗೆ ಶ್ರೀಮನ್ನಾರಾಯಣನು ತನ್ನ ಭಕ್ತರನ್ನು ಪೋಶಿಸುವನೊ, ಅದೇ ರೀತಿಯಲ್ಲಿ ನಮ್ಮ ರಾಯರು, ತಮ್ಮ ಭಕ್ತರನ್ನು ಸಲಹುವುದಕ್ಕೆ ಈ ಭೂಮಿಯಲ್ಲಿ ಅವತರಿಸಿದ್ದಾರೆ.
“ಹರಿ ಸರ್ವೋತ್ತಮ, ವಾಯು ಜೀವೊತ್ತುಮ” ಎಂಬ ಹಾದಿಯಲಿ ನಡೆದು ರಾಯರಲ್ಲಿ ಮೊರೆಹೋದರೆ,
“ನಳಿನನಾಭನ ಕೃಪಾಬಲದಿ ಇದೆ” ಎಂದು ಗುರು ಜಗನ್ನಾಥ ದಾಸರು ಹೇಳಿದ ಹಾಗೇ ಖಂಡಿತ ರಾಯರು ಶ್ರೀಹರಿಯ ಕೃಪೆಯಿಂದ ನಮ್ಮನು ಸಲಹುವರು.
“ತ್ವರಿತದಿಂದಲಿ ಸೇವಿಪನಾ
ಮರೆಯದೆಲೆ ಇಹಪರಸುಖ
ಕುರುಣಿಸೆಮ್ಮನು ಪೊರೆಯಲೆನುತಲಿ
ಗುರುಗಳನು ಕೊಂಡಾಡಿದೆ” ಎಂದು ಅಭಿನವ ಜನಾರ್ಧನ ವಿಠಲರು ಹೇಳಿದ ಹಾಗೇ, ತಡ ಮಾಡದೆ ನಮ್ಮನು ಸಲಹುವರ, ಮರೆಯದಲೇ ಸುಖವ ಕೊಡುವರ, ನಮ್ಮನು ಕರುಣಿಸಿ ಪೊರೆಯಬೇಕು ಎಂದು ರಾಯರನ್ನು ಕೊಂಡಾಡಿದರೆ ಸಾಕು, ರಾಯರು ನಮ್ಮನ್ನು ಸದಾ ಸಲಹುತ್ತಾರೆ.
“ಕರೆದಲಾಕ್ಷಣ ಬರುವನೆಂಬೋ ಬಿರಿದು ಪೊತ್ತಿಹನು” ಎಂದು ಗುರು ಜಗನ್ನಾಥದಾಸರು ಹೇಳಿದ ಹಾಗೇ, ತಮ್ಮ ಭಕ್ತರಡಿಗೆ ಬಂದು ಸಲಹುವರು ಎಂಬ ಬಿರುದು ರಾಯರದ್ದು, ಇಂತಹ ರಾಯರ ಸ್ಮರಣೆ ಮಾಡಿ ಧನ್ಯರಾಗೋಣ.
||ಮಧ್ವಾನ್ತರ್ಗತ ಶ್ರೀಕೃಷ್ಣಾರ್ಪಣಮಸ್ತು||
1 Comment
Om shree raghavendraya namaha..