“ಗರುಡ ವಾಹನ ರಂಗ ಗೋಪಾಲವಿಠಲ,
ಶರಣರ ಪಾಲಿಸುತ ಇರುತಿಪ್ಪನು ಇಲ್ಲಿ”
ಎಂದು ಗೋಪಾಲದಾಸರು ಹೇಳಿದ ಹಾಗೇ ರಾಯರಿದ್ದಲ್ಲಿ, ನಾರಾಯಣ ಕೂಡಾ ಇರುತ್ತಾನೆ. ರಾಯರ ಸೇವೆಯು ನಾರಾಯಣನ ಸೇವೆ. ರಾಯರು ಕರುಣೆವಾಯಿತು ಎಂದರೆ ತಾನಾಗೇ ನಾರಾಯಣನ ಕರುಣೆಯಾದಂತೆ.
“ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿ
ತಾನಾಗಿ ಶ್ರೀರಾಘವೇಂದ್ರಯತಿ ಒಲಿದ”
ಎಂದು ವ್ಯಾಸಾತತ್ವಜ್ಞರು ಹೇಳಿದಂತೆ ರಾಯರ ಒಲಿದ ಮೇಲೆ ಚಿಂತಿಸುವುದು ಏತಕೆ?
ದೈತ್ಯನಾದ ತಂದೆಗೆ ನರಹರಿ ರೂಪ ತೋರಿಸಿದ ರಾಯರ ಮಹಿಮೆಯನ್ನು ನಾವು ಸದಾ ಸ್ಮರಿಸುತ್ತ, ರಾಯರೇ ನಮಗೆ ನೀವೇ ಗತಿಯೆಂದು “ಜೀಯಾ ನೀನಲ್ಲದೆ, ಇನ್ನಾರು ಕಾಯ್ವರೋ” ಎಂದು ಶ್ರೀಧವಿಠಲರು ಹೇಳಿದ ಹಾಗೇ ನಂಬಿ ಮೊರೆಹೋದರೆ ಖಂಡಿತ ನಮ್ಮನು ರಕ್ಷಿಸುತ್ತಾರೆ.
“ಏಸು ಜನ್ಮದಿ ಬಂದಾ ದೋಷವ ಕಳೆದು ವಿ |
ಶೇಷ ಸುಖವ ಕೊಡುವ”
ಎಂದು ಗುರುಪ್ರಾಣೇಶ ದಾಸರು ಹೇಳಿದ ಹಾಗೇ ಎಷ್ಟೋ ಜನ್ಮಗಳಿಂದ ಬಂದ ಪಾಪಗಳನ್ನು ಕಳೆದು, ವಿಶೇಷವಾಗಿ ಹರಿಯಲ್ಲಿ ಭಕ್ತಿ ಇಡಿಸಿ ನಮ್ಮನು ಉದ್ಧರಿಸುವ ರಾಯರು ನಮ್ಮ ಈ ಕತ್ತಲೆಯ ಸಂಸಾರದಲ್ಲಿ ದಿನಕರರೇ ಸರಿ. ಅಂತಹ ದಾನವರನ್ನು ತಮ್ಮ ಜೊತೆ ಕೂರಿಸಿಕೊಂಡು ಅವರಗೆ ತತ್ವ ಭೋದನೆ ಮಾಡಿ ಎಲ್ಲರಿಗೂ ಸದ್ಗತಿಯತ್ತ ದಾರಿ ತೋರಿಸಿದ ರಾಯರು, ಅವರ ಭಕ್ತರಿಗೆ ಅನುಗ್ರಹ ಮಾಡೇ ಮಾಡುತ್ತಾರೆ. ಇಂತಹ ಘನ್ನ ಮಹಿಮರಾದ ರಾಯರನ್ನು ನಾವು ಸದಾ ಕಾಲ ಸ್ಮರಿಸಬೇಕು.
ಇಂತಹ ಸಂಸಾರವೆಂಬ ಘೋರ ವಾರಿಧಿಯನ್ನು ಜಯಿಸಲು ರಾಯರ ಆಶೀರ್ವಾದ ಅತ್ಯವಶ್ಯಕ.
“ಧರೆಯೋದ್ಧಾರಕೆ ಮೆರವರು ಗುರುಗಳು ವರಮಂತ್ರಾಲಯದಲ್ಲಿ”
ಎಂಬಂತೆ ಭಕ್ತರ ಉದ್ಧಾರಕಾಗಿಯೇ ರಾಯರು ಮಂತ್ರಾಲಯದಲ್ಲಿ ನೆಲಿಸಿದ್ದಾರೆ. ರಾಯರು ದಯಾಸಾಗರವಿದ್ದಂತೆ, ಅವರ ಕರುಣೆವಾಯಿತೆಂದರೆ ನಮ್ಮ ಜನ್ಮವು ಉದ್ಧಾರವಾಗುವುದು ನಿಶ್ಚಿತ.
||ಮಧ್ವಾನ್ತರ್ಗತ ಶ್ರೀಕೃಷ್ಣಾರ್ಪಣಮಸ್ತು||