“ಹರಿ ಸರ್ವೋತ್ತಮ ವಾಯು ಜೀವೊತ್ತುಮ” ಎಂಬ ಸಾರವನ್ನು ರಾಯರು ತಮ್ಮ ಎಲ್ಲಾ ಅವತಾರಗಳಲ್ಲಿ ಸಾರಿದ್ದಾರೆ.
ಭಗವಂತ ಅಣು ಅಣುವಿನಲ್ಲೂ ಇದ್ದಾನೆ ಎಂದು ವೇದಗಳು ಪ್ರತಿಪಾದಿಸುತ್ತವೆ, ಅದನ್ನು ಪ್ರಹಲಾದರಾಜರು ಇಳಿ ವಯ್ಯಸ್ಸಿನಲ್ಲೇ ಸರ್ವವ್ಯಾಪಿಯಾದ ನಾರಾಯಣನನ್ನು ತಂದೆಯ ಆಜ್ಞೆಯಂತೆ ಕಂಬದ ಮೂಲಕ ತೋರಿಸುತ್ತಾರೆ.
ಅಂತಹ ದೈತ್ಯ ಕುಲದಲ್ಲಿ ಜನಿಸಿದರೂ ಪ್ರಹಲಾದರಾಜರು ಅವರ ಭಕ್ತಿಯಿಂದ ನಾರಾಯಣನನ್ನು ಒಲಿಸಿಕೊಂಡರು.
ಪ್ರಹಲಾದರಾಜರ ಮೇಲೆ ವಾಯುದೇವರ ಅನುಗ್ರಹ ಸದಾ ಇರುವುದರಿಂದ ಅವರ ಜ್ಞಾನ, ಭಕ್ತಿ ಊಹಾತೀತ. ದೇವರನ್ನು ಒಲಿಸಿಕೊಳ್ಳೋ ಸಾಧನಗಳಲ್ಲಿ ಭಕ್ತಿಯು ಒಂದು ಅವಶ್ಯ ಸಾಧನೆ.
ದೇವರ ಮೇಲೆ ಭಕ್ತಿ ಬರಬೇಕಾದರೆ, ಮೊದಲು ವೇದಗಳ ಜ್ಞಾನ ಇರಲೇಬೇಕು. ವೇದಗಳ ಜ್ಞಾನ ಪಡೆಯಬೇಕಾದರೆ ಗುರುಗಳ ಆಶೀರ್ವಾದ ಹಾಗು ಕಾರುಣ್ಯ ಸದಾ ನಮ್ಮಮೇಲೆ ಇರಬೇಕು. ಇಂತಹ ಘೋರ ಕಲಿಯುಗದಲ್ಲೂ ಕೂಡಾ ಬಂದ ಭಕ್ತರಿಗೆ ಕಲ್ಪವೃಕ್ಷದಂತೆ ಬೇಡಿದ ವರಗಳನ್ನು ನೀಡುತ್ತಾ ಕುಳಿತಿರುವ ರಾಯರಲ್ಲದೆ ಮತ್ತೊಬ್ಬರು ಉಂಟೇ?
ಇಂತಹ ಗುರುಗಳ ಕಾರುಣ್ಯ ನಮಗೆ ಈ ಭಾವಸಾಗರವನ್ನು ಧಾಟಬೇಕಾದರೆ ಅತೀ ಅವಶ್ಯಕ.
“ಎನಿತು ಜನುಮದ ಪುಣ್ಯವೋ, ಮಾನವನಾಗಿರುವಿ
ಘನ್ನ ನೆನಿಪ ರಾಘವೇಂದ್ರ ಗುರುಗಳ ಪಡೆದಿರುವಿ”
ಅಂತ ದಾಸರು ಹೇಳಿದ್ದಾರೆ.
“ಇವರ ಪಾದ ಸ್ಮರಣೆಯ ಮಾಡದವನೇ ಪಾಪಿ” ಎಂದು ಶ್ರೀಧ ವಿಠಲರು ಹೇಳಿದ್ದಾರೆ.
ರಾಯರು ಇದ್ದ ಕಡೆಯಲ್ಲೆಲ್ಲ ಶ್ರೀಹರಿಯು ಇರುತ್ತಾನೆ ಅಂತ ಗೋಪಾಲದಾಸರು ಮಂತ್ರಾಲಯ ಕ್ಷೇತ್ರ ವರ್ಣಿಸುತ್ತ
“ಮಂತ್ರ ಸಿದ್ಧಿ ಕ್ಷೇತ್ರ ಇದು ನೋಡಿ ಕೋವಿದರು,
ಮಂತ್ರ ಪ್ರತಿಪಾದ್ಯ ಗೋಪಾಲವಿಠಲ ನಿಂದ” ಎಂದು ರಾಘವೇಂದ್ರರ ಸುಳಾದಿಯಲ್ಲಿ ಹೇಳಿದ್ದಾರೆ.
ನಮ್ಮ ಈ ಸಂಸಾರ ವಾರಿಧಿಯನ್ನು ದಾಟಿಸಲು ರಾಯರ ಆಶೀರ್ವಾದ ಬೇಕೇಬೇಕು. ಇಂತಹ ಭಕ್ತಾಗ್ರೇಸರ ಪಾದಕ್ಕೆ ಶರಣು ಹೊಕ್ಕಿ ನಮ್ಮೆಲ್ಲ ಕ್ಲೇಶಗಳನ್ನು ದೂರಮಾಡಿಕೊಂಡು ಹರಿಯ ಭಕ್ತಿ ಸಾಧನೆಯನ್ನು ಗಳಿಸಬೇಕು. ಕಲಿಯುಗದ ಕಾಮಧೇನು ಆಗಿರುವ ರಾಯರು ನಮಗೆ ಜ್ಞಾನ ಭಕ್ತಿ ಕೊಡೋದಿಲ್ವೆ? ಖಂಡಿತ ಕೊಡುತ್ತಾರೆ.
“ರಾಘವೇಂದ್ರ ಗುರುರಾಯರ ಸೇವಿಸಿರೋ, ಸೌಖ್ಯದಿ ಜೀವಿಸಿರೋ” ಎಂಬ ಮಾತು ನಮ್ಮೆಲ್ಲರ ಮೊದಲನೆಯ ಮೆಟ್ಟಿಲು ಆಗಲೇಬೇಕು.ಆಗ ರಾಯರ ದಯೆಯು ನಮ್ಮ ಮೇಲೆ ಸದಾ ಇರಲು ಸಾಧ್ಯ.
||ಮಧ್ವಾನ್ತರ್ಗತ ಶ್ರೀಕೃಷ್ಣಾರ್ಪಣಮಸ್ತು||