ರಂಗನೊಲಿದ ದಾಸರು – ಜಗನ್ನಾಥ ದಾಸರು

Daasarugalu
August 27, 2020
Ranganolida Dasaru – Tamil
August 27, 2020

ರಂಗನೊಲಿದ ದಾಸರು – ಜಗನ್ನಾಥ ದಾಸರು

“ಎನ್ನ ಭಿನ್ನಪ್ಪ ಕೇಳು ಧನ್ವಂತ್ರಿ ದಯ ಮಾಡು, ಸಣ್ಣವನಿವ ಕೇವಲ” ಎಂದು ಧನ್ವಂತ್ರಿ ನಾಮಕ ಪರಮಾತ್ಮನಲ್ಲಿ ಗೋಪಾಲದಾಸರು ಕೆಂಜೋಳದ ರೊಟ್ಟಿ ನೈವೇದ್ಯಿಸಿ ಶ್ರೀನಿವಾಸಚಾರ್ಯರಿಗೆ ಕೊಟ್ಟು ಅವರ ಹೊಟ್ಟೆ ಶೂಲಿ ಪರಿಹರಿಸಿ, ಅವರ ಮೇಲೆ ರಂಗನ ಕರುಣೆ ಸದಾ ಇರಿಸಿ, ನಮ್ಮ ಮಧ್ವ ಸಿಧಾಂತಕ್ಕೆ ರಂಗವೊಲಿದ ದಾಸರನ್ನು ಪರಿಚಯಿಸಿದರು.

ಜಗನ್ನಾಥ ದಾಸರ ಶಿಷ್ಯರಾದ ಪ್ರಾಣೇಶದಾಸರು ಒಂದು ಕೃತಿಯಲ್ಲಿ 
“ಐದನೆಯ ರೂಪ ವೀಗಿದಂತೆ ಬ-
ಹದು ಏಳು ಜನ್ಮ ಮುಂದಂತೆ”
ಅಂದರೇ ಜಗನ್ನಾಥ ದಾಸರಾಗಿ ಇದು ಐದನೇ ಜನ್ಮ ಮತ್ತೆ ಮುಂದೆ ಏಳು ಜನ್ಮವಿದೆ. ಆ ಐದು ಜನ್ಮಗಳಾವವು ಅಂದರೇ 
1) ಸಲ್ಹಾದರಾಜರು, ಪ್ರಹಲಾದರಾಜರ ತಮ್ಮಂದಿರಾಗಿ
2) ಎರಡನೇ ಜನ್ಮದಲ್ಲಿ ಶಲ್ಯ ರಾಜರಾಗಿ 
3) ಭಾವಿ ಸಮೀರರಾದ ವಾದಿರಾಜ ಸ್ವಾಮಿಗಳ ಶಿಷ್ಯ ಕೊಂಡಪ್ಪನಾಗಿ 
4) ಪುರಂದರದಾಸರ ಮಕ್ಕಳು ಅಭಿನವ ಪುರಂದರರಾಗಿ 
5) ಐದನೇ ಜನ್ಮದಲ್ಲಿ ಜಗನ್ನಾಥ ದಾಸರಾಗಿ. 
ಮುಂದೆ ಏಳು ಜನ್ಮ ವಿರುವುದು. 

ಶ್ರೀ ನರಸಿಂಹಾಚಾರ್ಯ ದಂಪತಿಗಳು ತಿರುಪತಿಯ ತಿಮ್ಮಪನ್ನ ಸೇವೆಮಾಡಿ ಸಂತಾನ ಪಡೆದು ಶ್ರೀನಿವಾಸಾಚಾರ್ಯರೆಂದು ಹೆಸರಿಟ್ಟರು. 
ನರಸಿಂಹಾಚಾರ್ಯರು ತುಂಬಾ ವೈರ್ಯಾಗ್ಯಶಾಲಿಗಳು ಹಾಗು ವೇದ ಶಾಸ್ತ್ರದಲ್ಲಿ ಪಾರಂಗತರಾಗಿ ಬ್ಯಾಗವಾಟ ಎಂಬೋ ಗ್ರಾಮದಲ್ಲಿ ಶ್ರೀರಂಗನ ಅರ್ಚಿಸುತ್ತಿದ್ದರು.
ಇವರ ಭಕ್ತಿಗೊಲಿದು ಶ್ರೀರಂಗನ ಆಜ್ಞೆಯಿಂದ  ಪುರಂದರದಾಸರು ಅವರ ಸ್ವಪ್ನದಲ್ಲಿ ಬಂದು ನರಸಿಂಹ ವಿಠ್ಠಲ ಎಂಬ ಅಂಕಿತ ದಯಪಾಲಿಸದರು. 
ಇಂತಹ ಪರಮ ಭಾಗವತರ, ಹರಿದಾಸರ ಅಡಿಯಲ್ಲಿ ಶ್ರೀನಿವಾಸಾಚಾರ್ಯರು ವಿದ್ಯೇ ಪಡೆದರು. 
ಮುಂದಿನ ವೇದ ಶಾಸ್ತ್ರಗಳ ವ್ಯಾಸಂಗ ರುದ್ರಂಶ ಸಂಭೂತರಾದ ಶ್ರೀವರದೇಂದ್ರ ತೀರ್ಥರಲ್ಲಿ ಮಾಡಿದರು.
ಹೀಗಾಗಿ ವರದೇಂದ್ರರಾಯರ ಪ್ರೀತಿಯ ಶಿಷ್ಯರೂ ಆಗಿದ್ದರು. 

ಮೊದಲನೇ ಜನ್ಮದಲ್ಲಿ ಪ್ರಹ್ಲಾದರಾಜರ ತಮ್ಮಂದಿರು ಆದ ಕಾರಣ ರಾಘವೇಂದ್ರ ತೀರ್ಥರ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಿದ್ದರು.
ಹರಿಕಥಾಮೃತಸಾರದ ಮೂವತ್ತೆರಡನೆ ಸಂಧಿಯಲ್ಲಿ ಪ್ರಹ್ಲಾದರಾಜರಿಗೆ ನಮಿಸುವ ಪದ್ಯದಲ್ಲಿ 
” ಓದಿಸುವ ಗುರುಗಳನು ಜರಿದು ಸಹೋದರಗೆ  ಉಪದೇಶಿಸಿದ” ಮತ್ತು 
“ಬಾಲಕನ ಭಿನ್ನಪ್ಪ ಕೇಳೋ ನೀ ಮುನಿಪ ” ಇಲ್ಲಿ ಬಾಲಕ ಎಂದು ಸಹೋದರ ಭಾವದಿಂದ ಹೇಳಿಕೊಂಡಿದ್ದಾರೆ,  ಹೀಗೆ ಹಲವು ಕಡೆಯಲ್ಲಿ ತಮ್ಮ ಸಹೋದರತ್ವವನ್ನು ಹೇಳ್ಳಿಕೊಂಡಿದ್ದಾರೆ. 
ಗುರುಜಗನ್ನಾಥ ದಾಸರು ತಮ್ಮ ರಾಘವೇಂದ್ರ ವಿಜಯದಲ್ಲಿ 
“ನಿನ್ನ ಮತವನುಸರಿಸಿ ಬಾಲರು 
ಘನ ಬೋಧ ಸುಭಕ್ತಿ ಪಡೆದರು 
ಧನ್ಯರಾದರು ಹರಿಯ ಭಕುತರುಯೆನಿಸಿ ತಾವೆಂದು”
ಎಂದು ಇಲ್ಲಿ ಹರಿಕಥಾಮೃತಸಾರ ರಚಿಸಿದ ಜಗನ್ನಾಥ ದಾಸರ ಹಾಗು ಪ್ರಹ್ಲಾದರಾಜರ ಸಂಬಂಧವನ್ನು ವರ್ಣಿಸಿದ್ದಾರೆ. 
“ಸಲ್ಹಾದಣ್ಣನೆ ಬಾರೋ ಪ್ರಲ್ಹಾದರಾಯ ಬಾರೋ” ಎಂದು ಶ್ರೀಧವಿಠಲರು ರಾಯರನ್ನು ವರ್ಣಿಸಿದ್ದಾರೆ. 

ಅಂತಹ ನರಸಿಂಹ ವಿಠ್ಠಲರ ಪುತ್ರರಾಗಿ, ಮಧ್ವ ಸಿದ್ಧಾಂತದ ಶರಧಿಗೆ ಚಂದ್ರರಂತಿರುವ ವರದೇಂದ್ರರಾಯರ ಶಿಷ್ಯರಾಗಿದ್ದ ಶ್ರೀನಿವಾಸಾಚಾರ್ಯರಿಗೆ ಅಹಂಕಾರ ಮತ್ತು ಅಜ್ಞಾನವಿಲ್ಲದಿದ್ದರು, ಗೋಪಾಲದಾಸರು ಹೇಳಿದ ಹಾಗೇ “ಕೆಸರಿಂದ ಕೆಸರು ತೊಳೆದಂಥೆ ಕರ್ಮದ ಪಥವು” ಕರ್ಮ ನಮ್ಮನ್ನು ಬಿಡುವುದಿಲ್ಲ. ಹಿಂದೆ ಶಲ್ಯರಾಜರಾಗಿದ್ದಾಗ ದುರ್ಯೋಧನನ ದುರಾನ್ನ ಉಂಡಿದ್ದರಿಂದ ಒಮ್ಮೆ ವಿಜಯದಾಸರು ಶ್ರೀನಿವಾಸಾಚಾರ್ಯರಿಗೆ ನೈವಿದ್ಯ ಹಾಗೂ ಊಟಕ್ಕೆ ಕರೆದಾಗ ಹಿಂದಿನ ಜನುಮಗಳ ಕರ್ಮದಿಂದ ಅವರು ಹೊಟ್ಟೆ  ಶೂಲಿ ಅಂತ ಏನೋ  ನೆಪ ಹೇಳಿ  ಅಸೂಯೆ ತೋರಿ ಹೋಗಲಿಲ್ಲ.

ಅದಾದ ನಂತರ ಶ್ರೀನಿವಾಸಾಚಾರ್ಯರಿಗೆ ನಿಜವಾಗಿಯೂ  ಹೊಟ್ಟೆ ಶೂಲಿ ಪ್ರಾರಂಭವಾಯಿತು. ಮಾಡಿದ ತಪ್ಪನ್ನು ಅರಿತು ಶ್ರೀನಿವಾಸಾಚಾರ್ಯರು ಮಂತ್ರಾಲಯಕ್ಕೆ ಹೋಗಿ ರಾಯರ ಸೇವೆ ಮಾಡಿದರು. ರಾಯರು ಅವರ ಸ್ವಪ್ನದಲ್ಲಿ ಬಂದು ತಿರುಪತಿಯಲ್ಲಿ ವಿಜಯದಾಸರ ಬಳಿ ಕಳಿಸಿದರು.
ತಿರುಪತಿಗೆ ಹೋಗಿ ವಿಜಯದಾಸರಿಗೆ ತಮ್ಮನು ಸಮರ್ಪಿಸಿ ಕ್ಷಮೆ ಕೇಳಿದರು, ವಿಜಯದಾಸರು ದಯೆ ತೋರಿಸಿ ಶೀನಿವಾಸಾಚಾರ್ಯರ ನಿಯತ ಗುರುಗಳಾದ ಗೋಪಾಲದಾಸರ ಬಳಿ ಉತ್ತನೂರಿಗೆ ಕಳಿಸಿದರು. ಗೋಪಾಲದಾಸರು ಶ್ರೀನಿವಾಸಚಾರ್ಯರ ಬರುವಿಕೆಯನ್ನೇ ಕಾಯುತ್ತಾ ಕುಳಿತಿದ್ದರು,  ಆಚಾರ್ಯರು ಬಂದು ಗೋಪಾಲದಾಸರ ಪಾದಕೆ ನಮಸ್ಕರಿಸಿ ತಮ್ಮ ಉದರ ಭಾದೆಯನ್ನು ನಿವಾರಿಸಲು ಕೇಳಿಕೊಂಡರು. 

ಆಗ ಗೋಪಾಲದಾಸರು ಮೊದಲು ಹೇಳಿದಂತೆ ಧನ್ವಂತ್ರಿ ನಾಮಕ ಪರಮಾತ್ಮನಲ್ಲಿ “ಎನ್ನ ಭಿನ್ನಪ ಕೇಳೋ ಧನ್ವಂತ್ರಿ ದಯಮಾಡು, ಸಣ್ಣವನಿವ ಕೇವಲ” ಎಂದು ಪ್ರಾರ್ಥಿಸಿ ಕೆಂಜೋಳದ ರೊಟ್ಟಿ ನೈವೇದ್ಯಿಸಿ ಕೊಟ್ಟು ಉದರ ಬಾಧೆ ಪರಿಹರಿಸಿದರು, ಹಾಗು ತಮ್ಮ ಅಯುಷ್ಶಿನ ನಲವತ್ತು ವರ್ಷಗಳನ್ನು ಶ್ರೀನಿವಾಸಾಚಾರ್ಯರಿಗೆ ಧಾರೆಯೆರೆದರು.
ಈ ಸಂಗತಿಯನ್ನು ಸ್ವತಃ ಜಗನ್ನಾಥ ದಾಸರೇ ಗೋಪಾಲದಾಸರ ಮೇಲೆ “ಅಪಮೃತ್ಯುಲುನ ಪೊರೆದೆ ಎನ್ನೊಳನಿದ್ದ ಅಪರಾಧವ ಮರೆದೆ” ಎಂದು ಕೊಂಡಾಡಿದ್ದಾರೆ.

ಮುಂದೆ ಶ್ರೀನಿವಾಸಚಾರ್ಯರಿಗೆ ಪಂಢರಪುರದ ಪಾಂಡುರಂಗನ ದರ್ಶನಕ್ಕೆ ಹಾಗು ಭೀಮಾರಥಿಯಲ್ಲಿ ಸ್ನಾನ ಮಾಡುವಾಗ ನಿನಗೆ ಅಂಕಿತ ದೊರಕುವುದು ಎಂದು ಗೋಪಾಲದಾಸರು ಹೇಳಿ ಕಳಿಸಿದರು. ಗುರುಗಳ ಆಜ್ಞೆಯಂತೆ ಶ್ರೀನಿವಾಸಾಚಾರ್ಯರು ಪಂಢರಪುರಕ್ಕೆ ತೆರಳಿ ಭೀಮಾರಥಿಯಲ್ಲಿ ಸ್ನಾನ ಮಾಡಲು ಮುಳುಗಿದಾಗ ಅಂತರಂಗದ ಬಿಂಬ ರೂಪ ದರ್ಶನವಾಯಿತು ಅದೇ ವೇಳೆಯಲ್ಲಿ ಜಗನ್ನಾಥ ವಿಠಲ ಎಂಬ ಅಂಕಿತವಿದ್ದ ಕಲ್ಲು ಆಚಾರ್ಯರಿಗೆ ಸಿಕ್ಕಿತು,  ಅಲ್ಲಿಂದ ಶ್ರೀನಿವಾಸಾಚಾರ್ಯರು ಜಗನ್ನಾಥ ದಾಸರಾದರು. ಆ ಅಂಕಿತವಿದ್ದ ಕಲ್ಲನ್ನು ತಲೆಮೇಲೆ ಹೊತ್ತುಕೊಂಡು 
“ಎಂದು ಕಂಬವೇನೋ ಪಾಂಡುರಂಗ ಮೂರುತಿಯಾ” ಎಂದು ಪಾಂಡುರಂಗನ ದರುಶನಕ್ಕೆ ಹೋದರು.

ತಮ್ಮ ಆತ್ಮೋದ್ಧಾರಕ್ಕೆ ಕಾರಣರಾದ ವಿಜಯದಾಸರನ್ನು “ರತುನ ದೊರಕಿತಲ್ಲಾ, ಎನಗೊಂದು ರತುನ ದೊರಕಿತಲ್ಲಾ” ಎಂದು ಭಕ್ತಿಯಿಂದ ಹಾಡಿ ಹೊಗಳುತ್ತಾ ಅವರ ಪದಕ್ಕೆ ಎರಗಿದರು. 
ಅವರ ನಿಯತ ಗುರುಗಳಾದ ಗಣೇಶಾಂಶ ಸಂಭೂತರಾದ ಗೋಪಾಲದಾಸರನ್ನು “ಗೋಪಾಲ ದಾಸರಾಯ ನಿಮ್ಮಯ ಪಾದ, ನಾ ಪೊಂದಿದೆನೋ ನಿಶ್ಚಯ” ಎಂದು ಹಾಡಿ ಕೊಂಡಾಡಿದ್ದಾರೆ. 

ಹೀಗೆ ಜಗನ್ನಾಥ ದಾಸರು ತಮ್ಮ ಸಾಹಿತ್ಯದಿಂದ ಮಧ್ವ ಮತ ಪ್ರಚಾರಿಸುತ್ತಿರುವಾಗ, ಒಂದು ದಿನ ಅವರ ಸ್ವಪ್ನದಲ್ಲಿ ವ್ಯಾಸರಾಯರು ಮತ್ತು ಪುರಂದರದಾಸರು ಪಾಂಡುರಂಗ ವಿಠಲನ ಎದುರು ನಿಂತು ಮಲಗಿದ್ದ ಜಗನ್ನಾಥ ದಾಸರನ್ನು ಎಬ್ಬಿಸಲು ಪ್ರಾರ್ಥಿಸಿದಾಗ ಪಾಂಡುರಂಗನು ದಾಸರನ್ನು ಎಬ್ಬಿಸಿದ ಅಂದರೇ ಸಾಂಕೇತಿಕವಾಗಿ ವ್ಯಾಸರಾಯರು ಹಾಗು ಪುರಂದರದಾಸರು ಪಾಂಡುರಂಗನಿಗೆ ಪ್ರಾರ್ಥಿಸಿ ಮಲಗಿದ್ದಂತಿರುವ ಜ್ಞಾನವನ್ನು ಎಬ್ಬಿಸಿದರು. 
ಹೀಗೆ ಜಗನ್ನಾಥ ದಾಸರಿಗೆ ಹರಿಕಥಾಮೃತಸಾರವನ್ನು ರಚಿಸಲು ಪ್ರೇರಣೆ ಸಿಕಂತ್ತಾಯಿತು. 
ಮೂವತ್ತೆರಡು ಸಂಧಿಗಳ ಮಹಾಕಾವ್ಯವನ್ನು ರಚಿಸಿ, ಎಲ್ಲಾ ಮುಮುಕ್ಷು ಜೀವಿಗಳಿಗೆ ಉಣ್ಣಿಸಿದರು. 
ಈ ಸಂಗತಿಯನ್ನು ಶ್ರೀಧ ವಿಠಲರು
“ವ್ಯಾಸತೀರ್ಥರ ಒಲುಮೆಯೋ ವಿಠಲೋಪಾಸಕಪ್ರಭುವರ್ಯ ಪುರಂದರ |
ದಾಸರಾಯರ ದಯವೋ ತಿಳಿಯದೆ ಓದಿ ಕೇಳದಲೆ ||
ಕೇಶವನ ಗುಣಮಣಿಗಳನ್ನು ಪ್ರಾಣೇಶಗರ್ಪಿಸಿ ವಾದಿರಾಜರ |
ಕೋಶಕೊಪ್ಪುವ ಹರಿಕಥಾಮೃತಸಾರ ಪೇಳುವರೆ ||”
ಎಂದು ಉಲ್ಲೇಖಿಸಿದ್ದಾರೆ.

ವರದೇಂದ್ರ ತೀರ್ಥರ ಹಾಗು ಜಗನ್ನಾಥ ದಾಸರ ಬಾಂಧವ್ಯ ತುಂಬಾ ಅನ್ಯೋನ್ಯವಾಗಿತ್ತು.
ವರದೇಂದ್ರರು ರಚಿಸಿದ ತಂತ್ರಸಾರದಲ್ಲಿ “ಬ್ಯಾಗವಾಟದ ರಂಗ ವೊಲಿದ ಶ್ರೀನರಸಿಂಹ 
ಭಾಗವತರುಣಗ ಶ್ರೀ ಜಗನ್ನಾಥ ದಾಸ |
ಬಾಗಿ ವಿಜ್ಞಾಪಿಸಲು ಕೈಕೊಂಡು ಪರಮಾನು
ರಾಗದಲಿ ಪೇಳಿದೆವು ತಂತ್ರಸಾರ|| “
ಎಂದು ಜಗನ್ನಾಥ ದಾಸರು ಕೇಳಿಕೊಂಡಿದ್ದರಿಂದ ಈ ತಂತ್ರಸಾರ ರಚಿಸಿದೆವು ಎಂದು ಹೇಳಿದ್ದಾರೆ. 

ಹೀಗೆ ಜಗನ್ನಾಥ ದಾಸರು ದಾಸ ಸಾಹಿತ್ಯದ ಕಟ್ಟಡವಾದರೆ ಅದಕ್ಕೆ ಬುನಾದಿಯಾಗಿ ನಿಂತ್ತಿದರು ವರದೇಂದ್ರರು.
ಜಗನ್ನಾಥ ದಾಸರು “ವರದೇಂದ್ರ ಯತಿಚಕ್ರವರ್ತಿ, ನಿರಂತರ ವರ್ಣಿಸುವೆ ನಿಮ್ಮ ಕೀರ್ತಿ” ಎಂದು ವರದೇಂದ್ರರಾಯರ ಮೇಲೆ ಕೃತಿ ರಚಿಸಿದ್ದಾರೆ.

ಜಗನ್ನಾಥ ದಾಸರು ಮಧ್ವ ಸಿಧಾಂತದ ಜೊತೆಜೊತೆಗೆ ದಾಸ ಪಂಥವನ್ನೂ ಕೂಡಾ ಬೆಳಿಸಿದ್ದಾರೆ.
ಜಗನ್ನಾಥ ದಾಸರ ಶಿಷ್ಯರಲ್ಲಿ ಪ್ರಮುಖರು ಹನ್ನೊಂದು ಶಿಷ್ಯರು ಅವರಲ್ಲಿ ಕೆಲವರು
1) ಪ್ರಾಣೇಶ ದಾಸರು
2) ಶ್ರೀಧ ವಿಠಲರು
3) ಗುರು ಶ್ರೀಶ ವಿಠಲರು
4) ಮನೋಹರ ವಿಠಲರು
5) ಭೀಮೇಶ ವಿಠಲರು
6)ಅಭಿನವಜನಾರ್ಧನ ವಿಠಲರು
7)ಆನಂದ ವಿಠಲರು
8)ವೆಂಕಟ ವಿಠಲರು
9)ಗೋಪತಿ ವಿಠಲರು
10) ಪ್ರಸನ್ನ ವಿಠಲರು

ಮಧ್ವ ಸಿಧಾಂತಕ್ಕೆ ಅಪಾರ ಕೊಡುಗೆ ನೀಡಿ,  ಪರಮ ಭಾಗವತರಗೊಸ್ಕರ ಹರಿಕಥಾಮೃತಸಾರವನ್ನು ರಚಿಸಿ 
ಶುಕ್ಲ ಸಂವತ್ಸರದ ಭಾದ್ರಪದ ಮಾಸ ಶುಕ್ಲ ಪಕ್ಷದ ನವಮಿ ದಿವಸ ಮಾನವಿಯಲ್ಲಿ ಅವರ ಒಂದು ಅಂಶವನ್ನು ಕಂಭದಲ್ಲಿರಿಸಿ ಇಹ ಲೋಕ ತ್ಯಜಿಸಿದರು.
ಇದನ್ನು ಅವರ ಶಿಷ್ಯರಾದ ಶ್ರೀಧ ವಿಠಲರು “ತೆರಳಿದರು ಶ್ರೀ ಜಗನ್ನಾಥದಾಸಾರ್ಯರು” ಎಂಬ ಕೃತಿಯಲ್ಲಿ
“ವರಶುಕ್ಲ ವತ್ಸರದ ಭಾದ್ರಪದ ಶಿತಪಕ್ಷ | ಹರಿವಾರ ನವಮಿಯಲ್ಲಿ|
ಸುರಸಿದ್ಧ ಸಾಧ್ಯ ಸನ್ನುನಿಗಣಾರ್ಚಿತಪಾದ ಹರಿಯೆ ಪುರನೆಂದೆನುತಲಿ||
ಧರಣಿಯನು ತ್ಯಜಿಸಿ ಬಹುಮಾನ ಪೂರ್ವಕವಾಗಿ | ಬೆರೆದು ಸುರಸಂದಣಿಯಲಿ || ಪರಮಾರ್ಥಮೈದಿ ಮನ ಹರಿಯ ಪಾದದಲಿಟ್ಟು |
ವರವಿಷ್ಣು ದೂತ ವೈಮಾನಿಕರ ಒಡಗೂಡಿ||”
ಎಂದು ಉಲ್ಲೇಖಿಸಿದ್ದಾರೆ.
ಅಭಿನವ ಜನಾರ್ಧನ ವಿಠಲರು “ಹರಿಯಪುರಕ್ಕೆ ತೆರೆಳಿಪೊದರು” ಎಂಬ ಕೃತಿಯಲ್ಲಿ
“ನೋಳ್ಪಜನಕೆ | ಸಾಂಶವೆಂದು ತಿಳಿವುದಕೆ ಒಂದಂಶ ಸ್ತಂಭದಲ್ಲಿ ನಿಲಿಸಿ” ಎಂದು ಬರೆದಿದ್ದಾರೆ.
ಇಂತಹ ದಾಸರನ್ನು ಪಡೆದ ನಾವೇ ಧನ್ಯರು.

ಜಲಜೇಷ್ಠ ನಿಭಾಕಾರಂ ಜಗದೀಶ ಪದಾಶ್ರಯಂ |
ಜಾಗತೀತಲ ವಿಖ್ಯಾತಂ ಜಗನ್ನಾಥ ಗುರಂ ಭಜೇ ||

   ಮಧ್ವಾನ್ತರ್ಗತ ಶ್ರೀಕೃಷ್ಣಾರ್ಪಣಮಸ್ತು 

Translation to Tamil done by Srikanth S Rao – Click here

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: