Saptamo Matsamo Yogi…

Rayara Mahime Snippets
July 1, 2021
Chaturmasa – all about it!
July 20, 2021

Saptamo Matsamo Yogi…

ಸಪ್ತಮೋ ಮತ್ಸಮೋ ಯೋಗೀ ವರದೇಂದ್ರೋ ಭವಿಷ್ಯತಿ

ಶ್ರೀನರಹರಿ ತೀರ್ಥರ ಆದಿಯಾಗಿ ಶ್ರೀಪಾದರಾಜರು, ಶ್ರೀವ್ಯಾಸರಾಜರು ಮುಂದೆ ಶ್ರೀಪುರಂದರ ದಾಸರ ಶ್ರೇಷ್ಠವಾದ ಭಕ್ತಿ ಸಾಹಿತ್ಯವನ್ನ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸಲು ಕಾರಣಿಭೂತರು ಜಗನ್ನಾಥ ದಾಸರು. ಇಂತಹ ಮಹನೀಯರ ಕಾಲಘಟ್ಟದಿಂದ ಬಂದ ಈ ದಾಸ ಸಾಹಿತ್ಯಕ್ಕೆ ಜನರ ನಿಂದನೆ, ಅಥವಾ ದಾಸ ಸಾಹಿತ್ಯವನ್ನು ಕಡೆಗಣಿಸಿ ನೋಡಿದ್ದು ಉಂಟು. ಅದೆನ್ನೆಲ್ಲ ಒಂದು ತಡೆ ಗೋಡೆ ಹಾಗೆ ತಡೆದು, ಸ್ವತಃ ಶ್ರೀಪಾದರಾಜರು, ಶ್ರೀವ್ಯಾಸರಾಜರು ಮುಂತಾದ ಯತಿಗಳು ಕನ್ನಡದಲ್ಲಿ ಭಕ್ತಿ ಕೀರ್ತನೆಗಳನ್ನು ರಚಿಸಿ ಹರಿದಾಸ ಸಾಹಿತ್ಯಕ್ಕೆ ಒಂದು ಭದ್ರ ಬುನಾದಿಯನ್ನು ಹಾಕಿದರು. ಇಂತಹ ಒಂದು ವಿಶಿಷ್ಟವಾದ ಸಾಹಿತ್ಯದ ಹೂ ತೋಟದಲ್ಲಿ, ಹರಿಕಾತಮೃತಸಾರ ಎನ್ನುವ ದೇವಲೋಕದ ಪಾರಿಜಾತ ವೃಕ್ಷವನ್ನು ಇಟ್ಟವರು ಜಗನ್ನಾಥ ದಾಸರು. ಇಂತಹ ಪರಮ ಭಾಗವತರ ಗುರುಗಳೇ ನಮ್ಮ ರುದ್ರಾಂಶ ಸಂಭೂತರಾದ ಶ್ರೀವರದೇಂದ್ರ ತೀರ್ಥರು.

ಅಖಂಡ ಭಾರತದಲೆಲ್ಲ ಹರಿದಾಸ ಸಾಹಿತ್ಯ ಬೆಳೆದಿದೆ, ಅದರಲ್ಲಿ ರಾಯಚೂರು ಜಿಲ್ಲೆಯು ತನ್ನದೇ ಆದ ಕೊಡುಗೆ ಕೊಟ್ಟಿದೆ. ದಾಸ ಸಾಹಿತ್ಯಕ್ಕೆ ಕೇಂದ್ರ ಬಿಂದುವಾಗಿ, ಹರಿದಾಸರ ಬಿಡು ಅಂದರೇ ತಪ್ಪಾಗಲಾರದು.ಈ ಪ್ರಾಂತ್ಯದ ಎಲ್ಲಾ ಹರಿದಾಸರೆಂಬೊ ನಕ್ಷತ್ರಗಳಿಗೆ ಸೂರ್ಯನಂತೆ ಬೆಳುಕು ನೀಡಿದವರು ವರದೇಂದ್ರ ತೀರ್ಥರು. ಜಗನ್ನಾಥ ದಾಸರು, ಪ್ರಾಣೇಶ ದಾಸರು ಹಾಗೆ ಅವರ ಶಿಷ್ಯ ಪರಂಪರೆ ವರದೇಂದ್ರ ತೀರ್ಥರನ್ನ ಅವರ ಕೀರ್ತನೆಗಳಲ್ಲಿ ಹಾಡಿ ಕೊಂಡಾಡಿದ್ದಾರೆ.

ನೀವು ಇಲ್ಲದೆ ಇದ್ದರೆ ನಮಗೆ ಯಾರು ಸಂಸಾರದಲ್ಲಿ ರಕ್ಷಿಸುವರು? ಯಾರು ನಮ್ಮ ಅಜ್ಞಾನವೆಂಬ ಅಂಧಕಾರವನ್ನು ಕಳೆಯುವರು? ಎಂದು ರಾಘವೇಂದ್ರ ತೀರ್ಥರಲ್ಲಿ ಭಕ್ತರು ಕೇಳಿದಾಗ, ಸ್ವತಃ ಗುರುರಾಯರೇ
“ಸಪ್ತಮೋ ಮತ್ಸಮೋ ಯೋಗೀ ವರದೇಂದ್ರೋ ಭವಿಷ್ಯತಿ” ಅಂದರೇ ಶ್ರೀರಾಘವೇಂದ್ರ ರಾಯರ ಶಿಷ್ಯ ಪರಂಪರೆಯಲ್ಲಿ ಅವರ ನಂತರ ಬರುವ ಏಳನೇ ಯತಿಯು ನನ್ನಂತಯೇ ಇರುವವರು ಎಂದು ಭವಿಷ್ಯವನ್ನು ನುಡಿದಿದ್ದರು. ಅಂತಹ ರಾಯಾರಂತೆ ಪರಮ ಕರುಣಾಮಯಿಗಳು, ಹಾಗು ಪರಮತವನ್ನು ಖಂಡಿಸಿ ಹರಿ ಸರ್ವೋತ್ತಮತ್ವವನ್ನು ಸ್ಥಾಪಿಸಾದವರು, ಹಾಗು ಹರಿದಾಸ ಸಾಹಿತ್ಯಕ್ಕೆ ಅಷ್ಟೇ ಸಮವಾದ ಸ್ಥಾನವನ್ನು ಕೊಟ್ಟವರು ಶ್ರೀವರದೇಂದ್ರ ತೀರ್ಥ ಶ್ರೀಪಾದಂಗಳವರು.

ಶ್ರೀವರದೇಂದ್ರ ತೀರ್ಥರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ, ಅದರಲ್ಲಿ ತಂತ್ರಸಾರವನ್ನು ಕನ್ನಡಿಕರಿಸಿದ್ದು ಇನ್ನೊಂದು ವಿಶೇಷತೆ. ಈ ತಂತ್ರಸಾರ ಗ್ರಂಥದಲ್ಲಿ, ಶ್ರೀಜಗನ್ನಾಥ ದಾಸರ ಹಾಗು ಶ್ರೀವರದೇಂದ್ರ ತೀರ್ಥರ ಗುರು ಶಿಷ್ಯತ್ವದ ಅನ್ಯೋನ್ಯ ಸಂಬಂಧ ತಿಳಿದು ಬರುತ್ತದೆ. ಶ್ರೀವರದೇಂದ್ರ ತೀರ್ಥರು ತಂತ್ರಸಾರ ಗ್ರಂಥದಲ್ಲಿ ಸ್ವತಃ ತಾವೇ ಧಾಖಲಿಸಿದ ಹಾಗೆ 
“ಬ್ಯಾಗವಾಟದರಂಗ ವೊಲಿದ ಶ್ರೀನರಸಿಂಹ | ಭಾಗವತರುಣಗ ಶ್ರೀ ಜಗನ್ನಾಥದಾಸ | ಬಾಗಿ ವಿಜ್ಞಾಪಿಸಲು ಕೈಕೊಂಡು ಪರಮಾನು ರಾಗದಲಿ ಪೇಳಿದವು ತಂತ್ರಸಾರ”
ಬ್ಯಾಗವಾಟ ರಂಗನ ಅನುಗ್ರಹಕ್ಕೆ ಪಾತ್ರರಾದ ಶ್ರೀನರಸಿಂಹ ಆಚಾರ್ಯರ ಮಕ್ಕಳಾದ ಶ್ರೀಜಗನ್ನಾಥ ದಾಸರು, ಶ್ರೀವರದೇಂದ್ರ ತೀರ್ಥರ ಬಳಿ ಬಂದು ಈ ಗ್ರಂಥವನ್ನು ರಚಿಸಲು ವಿಜ್ಞಾಪಿಸಿದಾಗ, ವರದೇಂದ್ರ ತೀರ್ಥರು ಶ್ರೀಮದಾಚಾರ್ಯರ ತಂತ್ರಸಾರ ಗ್ರಂಥವನ್ನು ಕನ್ನಡದಲ್ಲಿ ರಚಿಸಿದರು.
“ಕರುಣಾಬ್ಧಿ ವಸುಧೇಂದ್ರರಾಯರ ಕೃಪಾಬಲದಿ | ವಿರಚಿಸಿದೆ ವೀಗ್ರಂಥ ಪದ ರೂಪದಿ” ತಮ್ಮ ಆಶ್ರಮ ಗುರುಗಳಾದ ಶ್ರೀವಸುಧೇಂದ್ರ ತೀರ್ಥರ ಕೃಪೆಯಿಂದ ಈ ಗ್ರಂಥವನ್ನು ರಚಿಸಿದೆವು, ಎಂದು ಗುರುಸ್ಮರಣೆಯು ಮಾಡಿದ್ದಾರೆ.ಶ್ರೀಜಗನ್ನಾಥ ದಾಸರು ತಮ್ಮ ವಿದ್ಯಾಗುರುಗಳಾದ ಶ್ರೀವರದೇಂದ್ರ ತೀರ್ಥರನ್ನು ” ವರದೇಂದ್ರ ಯತಿಚಕ್ರವರ್ತಿ ನಿರಂತರ
ವರಣಿಸುವೆ ನಿಮ್ಮ ಕೀರ್ತಿ|
ಪರಮ ಕರುಣಿ ನಿಮ್ಮ ಚರಣಕಮಲಯುಗ
ಕ್ಕೆರಗಿ ಬೇಡುವೆ ವರವಾ ಎಮ್ಮನು ಪೊರೆವಾ||”
ಎಂದು ಹಾಡಿ ಕೊಂಡಾಡಿದ್ದಾರೆ.

ಶ್ರೀವರದೇಂದ್ರ ತೀರ್ಥರು ಶ್ರೀಪ್ರಾಣೇಶ ದಾಸರಲ್ಲಿ ಬಂದಾಗ, ದಾಸರಿಗೆ ಅನುಗ್ರಹಿಸಿದರು, ಹಾಗೆ ಪ್ರಾಣೇಶ ದಾಸರಲ್ಲಿ ಅವರ ಮನೆಯ ಬಣವಿ ಜಾಗವನ್ನು ದಾನ ಕೇಳಿದರು. ಗುರುಗಳ ಅಣತೆಯಂತೆ ಶ್ರೀಪ್ರಾಣೇಶ ದಾಸರು ಆ ಜಾಗವನ್ನು ಶ್ರೀ ಕೃಷ್ಣಾರ್ಪಣಮಸ್ತು ಎಂದು ಗುರುಗಳಿಗೆ ಸಮರ್ಪಿಸಿದರು. ಮುಂದೆ ಶ್ರೀವರದೇಂದ್ರ ತೀರ್ಥರು ಪುಣೆಯಲ್ಲಿ ವೃಂದಾವನಸ್ಥರಾದ ಮೇಲೆ ಶ್ರೀಪ್ರಾಣೇಶ ದಾಸರ ಸ್ವಪ್ನದಲ್ಲಿ ಬಂದು, ಅವರ ಮನೆಯ ಬಣವಿ ಜಾಗದ ಮಧ್ಯದಲ್ಲಿ ಒಂದು ಮನುಷ್ಯನ ಅಳತೆಯ ತುಳುಸಿ ವೃಕ್ಷದ ರೂಪದಿಂದ ತಾವು ಬಂದಿರುವುದಾಗಿ ತಿಳಿಸುತ್ತಾರೆ. ಅಲ್ಲಿಯೇ ಶ್ರೀಪ್ರಾಣೇಶ ದಾಸರು ವೃಂದಾವನವನ್ನು ನಿರ್ಮಿಸುತ್ತಾರೆ, ಇಂದಿಗೂ ವರದೇಂದ್ರ ರಾಯರ ಸ್ವಪ್ನ ವೃಂದಾವನವೆಂದೇ ಪ್ರಸಿದ್ಧಿ ಇದೆ. ಹೀಗೆ ಶ್ರೀವರದೇಂದ್ರ ರಾಯರ ಅನುಗ್ರಹಕ್ಕೆ ಪಾತ್ರರಾದ ಶ್ರೀಪ್ರಾಣೇಶ ದಾಸರು ತಮ್ಮ ಗುರುಗಳನ್ನು ನಾನಾ ವಿಧದಲ್ಲಿ ಹಾಡಿ, ಕೀರ್ತನೆಗಳನ್ನು ರಚಿಸಿ ಕೊಂಡಾಡಿದ್ದಾರೆ.


“ಹಿಂದಿನ ಸುಕರ್ಮವೇಸು | ಬಂದೊದಗಿದವೋವರ | ದೇಂದ್ರರಾಯ ಬಂದ ನಮ್ಮ ಮಂದಿರಕಿಂದು|ಪ |
ಶ್ರೀಕರಪ್ರಾಣೇಶ ವಿಟ್ಠಲ ನೇಕಾಂತದಿ ಒಲಿಸುವಲ್ಲಿ
ಈ ಕುಂಭಿಣಿಯೊಳಗೀತಗೆ ಕಾಣೆನೀಡ | ನೀಕಾಯಬೇಕೆಂದವರ ಶೋಕವ ಪರಿಹರಿಸಿ ಜೋಕೆಮಾಡುವ ನಿತ್ಯ ದೇಶಿಕ ಕುಲಪತಿ||”
ಎಂದು ಶ್ರೀವರದೇಂದ್ರ ರಾಯರು ತಮ್ಮ ಮನೆಗೆ ಬಂದಿದ್ದು ಹಿಂದಿನ ಜನ್ಮದ ಸುಕೃತವೆಂದು ಹಾಡಿ ಕೊಂಡಾಡಿದ್ದಾರೆ.

ಶ್ರೀರಾಘವೇಂದ್ರ ರಾಯರಂತೆಯೇ ಕರುಣಾಮಯಿಗಳಾದ ಶ್ರೀವರದೇಂದ್ರ ರಾಯರ ಕರುಣೆ ನಮ್ಮ ಮೇಲೆ ಸದಾ ಇರಲಿ ಎಂದು, ಶ್ರೀವರದೇಂದ್ರ ರಾಯರ ಆರಾಧನೆ ದಿನದಂದು ಅವರನ್ನು ಪ್ರಾರ್ಥಿಸಿ ಧನ್ಯರಾಗೋಣ.

“ವಾದೇ ವಿಜಯ ಶೀಲಾಯ ವರದಾಯ ವರಾರ್ಥಿನಾಂ | ವದಾನ್ಯಜನ ಸಿಂಹಾಯ ವರದೆಂದ್ರಾಯತೆ ನಮಃ ||”
||ಮಧ್ವಾನ್ತರ್ಗತ ಶ್ರೀಕೃಷ್ಣಾರ್ಪಣಮಸ್ತು||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: