ಪ್ರಾಣೇಶದಾಸರಾಯರು – ಭಾಗ ೧

ಗುರುರಾಜರ ಸೇವೆಯೇ ಭಾಗ್ಯ
October 22, 2020
ಪ್ರಾಣೇಶದಾಸರಾಯರು – ಭಾಗ ೨
October 24, 2020

ಪ್ರಾಣೇಶದಾಸರಾಯರು – ಭಾಗ ೧

ಪ್ರಾಣಪತಿಪದದ್ವಂದ್ವ ಪಂಕಜಾಸಕ್ತ ಮಾನಸ |
ಶಮಾದಿಗುಣ ಸಂಯುಕ್ತಂ ಶ್ರೀ ಪ್ರಾಣೇಶಗುರುಂ ಭಜೆ ||
ಕರವ ಮುಗಿದು ನಿಮ್ಮ ಮಹಿಮೆ| ಕೊಂಡಾಡುವೆ ದಾಸರಾಯ|
ಹರಿದಾಸರ ಪ್ರಿಯ ನಮೊ ನಮೋ| ಪ್ರಾಣೇಶದಾಸರಾಯ||

ಶ್ರೀ ಮಾನವಿ ಪ್ರಭುಗಳೆಂದು ಪ್ರಖ್ಯಾತರಾದ ಶ್ರೀಜಗನ್ನಾಥ ದಾಸರ ದೇಹ ರಥಕ್ಕೆ ಎರಡು ಗಾಲಿಗಳು. ಒಬ್ಬರು ಶ್ರೀ ಪ್ರಾಣೇಶದಾಸರು ಮತ್ತು ಇನ್ನೊಬ್ಬರು ಶ್ರೀ ಶ್ರೀದವಿಠ್ಠಲ ದಾಸರು.

ಇಂದು ಇವರ ಆರಾಧನಾ ಪರ್ವಕಾಲ.

ತನ್ನಿಮಿತ್ತವಾಗಿ ಶ್ರೀ ದಾಸರ ಸ್ಮರಣೆ ಭಾಗ್ಯ.

ರಾಯಚೂರು ಜಿಲ್ಲೆ ಹರಿದಾಸರ ತವರೂರು.ಎಲ್ಲಾ ಹರಿದಾಸರು ಹುಟ್ಟಿದ ಭೂಮಿ.
ಇಂತಹ ರಾಯಚೂರು ಜಿಲ್ಲೆಯ ಲಿಂಗಸೂಗುರು ಪ್ರಾಂತ್ಯ ಸಹ ದಾಸಸಾಹಿತ್ಯಕ್ಕೆ ಅನೇಕ ಕೊಡುಗೆಯಾಗಿ ಹರಿದಾಸರ ಕೃತಿಗಳನ್ನು ಕೊಟ್ಟಿದೆ. ಲಿಂಗಸೂಗುರು ಪ್ರಾಂತ್ಯದಲ್ಲಿ ಇರುವ ಕಶ್ಯಪ ಗೋತ್ರದ ಶ್ರೀಪತಿ ಅಯ್ಯನವರು ಎಂಬ ಸದ್ ವೈಷ್ಣವ ವಂಶದಲ್ಲಿ ಶಾನುಭೋಗ ತಿರುಕಪ್ಪನವರ ಸುತರಾಗಿ ಜನಿಸಿ ಶ್ರೀ ಯೋಗೆಂದ್ರರಾಯರು ಎಂದು ಇವರು ಕರೆಸಿಕೊಂಡರು.

ಇವರ ಜನನ ಕಾಲದಲ್ಲಿ ಶ್ರೀ ದಾಸರ ದೇಹ (ಶರೀರ)ವೆಲ್ಲವು ಶ್ವೇತ ವರ್ಣ ವಿಶಿಷ್ಟ ವಾಗಿ ಅತಿ ತೇಜಃ ಪುಂಜವಾಗಿ ಕೂಡಿತ್ತು.

ಶ್ರೀ ದಾಸರ ಮಾತಾ ಪಿತೃಗಳು ಇದು ಒಂದು ಯಾವುದೋ ಕೆಟ್ಟ ರೋಗ ಎಂದು ಎನಿಸಿ ಇವರನ್ನು ಕರೆದುಕೊಂಡು ಶ್ರೀ ಮಂತ್ರಾಲಯ ಮಹಾಪ್ರಭುಗಳ ಬಳಿ ಸೇವೆಗೆ ಕರೆದುಕೊಂಡು ಹೋಗುತ್ತಾರೆ. ಬೇಡಿದ ವರವ ಕೊಡುವ ದಾತ ತಾತ ಶ್ರೀ ಮಂಚಾಲಿ ಮಹಾಪ್ರಭುಗಳು.

ತಂದೆ ತಾಯಿಗಳ ಮತ್ತು ಬಾಲಕನ ಸೇವೆಗೆ ಮೆಚ್ಚಿ ಪ್ರಸನ್ನರಾದ ಗುರುಗಳು ಅನುಗ್ರಹ ಮಾಡುತ್ತಾರೆ. ಗುರುಗಳ ಅನುಗ್ರಹದಿಂದ ಅವರ ಶರೀರದಲ್ಲಿ ಇದ್ದ ಶ್ವೇತ ವರ್ಣ ನಿವಾರಣೆ ಆಗಿ ಅಂಗಾಲಿನಲ್ಲಿ ಮಾತ್ರ ಉಳಿಯುತ್ತದೆ. ಇದನ್ನು ಕಂಡು ಅವರ ಮಾತಾ ಪಿತೃಗಳು ಪುನಃ ರಾಯರ ಸೇವೆಯನ್ನು ಮಾಡಲು, ಶ್ರೀ ಗುರುರಾಜರು ಸ್ವಪ್ನದಲ್ಲಿ ಬಂದು “ಅದು ಮೂಲ ಸ್ವರೂಪಕ್ಕೆ ಸೇರಿದ ಕಾರಣ ಇದು ಹೋಗಲಾರದೆಂದು ಮತ್ತು ಇದು ಇವರಿಗೆ ದೋಷವಲ್ಲವೆಂದು ಹೇಳಿ ಸೂಚನೆಯನ್ನು ನೀಡಿದ್ದಾರೆ. ನಂತರ ಮಾತಾಪಿತೃಗಳು ಬಾಲಕ ಯೋಗಿಂದ್ರ ಅಥವಾ ಯೋಗಪ್ಪನ ಜೊತೆಯಲ್ಲಿ ಸಂತಸದಿಂದ ಊರಿಗೆ ಹಿಂತಿರುಗಿ ತಮ್ಮ ಕಾರ್ಯಗಳಲ್ಲಿ ತೊಡುಗುವಂತರಾದರು.

ಶ್ರೀ ಪ್ರಾಣೇಶದಾಸರು ಸಾಕ್ಷಾತ್ ಮರುದಂಶ ಯುಕ್ತರಾದ ಶ್ರೀ ಪಾಂಡುರಾಜನ ಅವತಾರವೆಂದು ಹಿರಿಯರ ಮತ್ತು ಬಲ್ಲವರ ಹೇಳಿಕೆ ಮೇಲೆ ತಿಳಿದು ಬರುತ್ತದೆ.
ಹಿರಿಯ ಜನರು ಅರುಹಿದ ಇವರ ಜನ್ಮ ರಹಸ್ಯ ಇದು.

ನಂತರ ಶ್ರೀ ಯೋಗೆಂದ್ರರಾಯರು ಬೆಳೆದು ದೊಡ್ಡವರಾಗಿ ಲೌಕಿಕ ವೃತ್ತಿ ಯಾದ ಶ್ಯಾನುಭೋಗದಲ್ಲಿದ್ದು ನಂತರದಲ್ಲಿ ಪೂರ್ವ ಜನುಮದ ಸುಕೃತದ ಫಲದಂತೆ ಸಕಲ ವೇದಾರ್ಥ ಪ್ರತಿಪಾದಕವಾದ ಮಹಾನ್ ಗ್ರಂಥ ವಾದ ಶ್ರೀ ಮದ್ ಹರಿಕಥಾಮೃತ ಸಾರವನ್ನು ರಚಿಸಿದ ಶ್ರೀ ಮಾನವಿ ಪ್ರಭುಗಳು ಆದ ಶ್ರೀ ಜಗನ್ನಾಥ ದಾಸರ ಸಂದರುಶನವಾಗುತ್ತದೆ. ದಾಸರಲ್ಲಿ ವರ ತತ್ವಗಳ ಉಪದೇಶವನ್ನು ಕೈಕೊಂಡು ಅನೇಕ ವರುಷಗಳ ಕಾಲ ಶ್ರೀ ಜಗನ್ನಾಥ ದಾಸರ ಸೇವೆ ಯನ್ನು ಮಾಡಿ ಅವರಿಂದ ಶ್ರೀ ಪ್ರಾಣೇಶ ವಿಠ್ಠಲ ಎಂಬ ಅಂಕಿತವನ್ನು ಪಡೆದು ನಂತರದಲ್ಲಿ ಶ್ರೀ ಯೋಗೆಂದ್ರ ರಾಯರು ಶ್ರೀ ಪ್ರಾಣೇಶದಾಸರು ಎಂದೇ ಜಗತ್ಪ್ರಸಿದ್ಧ ರಾಗುತ್ತಾರೆ.

ಮಾನವಿ ಪ್ರಭುಗಳ ಪರಮ ಪ್ರೀತಿ ಪಾತ್ರರಾದ ದಾಸರಿಗೆ ಭಗವಂತನ ಅನುಗ್ರಹದಿಂದ ಅಪರೋಕ್ಷಿಗಳಾದರು.

ಶ್ರೀ ಹರಿ ವಾಯು ಗುರುಗಳ ಅನುಗ್ರಹ ಬಲದಿಂದ ಅನೇಕ ಪದ್ಯ ಹರಿಕೀರ್ತನೆಗಳನ್ನು ರಚನೆ ಮಾಡಿದ್ದಾರೆ.

ಸಂಗ್ರಹ..ಲಿಂಗಸೂಗುರು ಪ್ರಾಂತ್ಯದ ಹಿರಿಯರಿಂದ ಕೇಳಿದ್ದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: