ಪ್ರಾಣೇಶದಾಸರಾಯರು – ಭಾಗ ೩

Purusha Sukta – 11
October 26, 2020
Purusha Sukta – 12
November 2, 2020

ಪ್ರಾಣೇಶದಾಸರಾಯರು – ಭಾಗ ೩

ಪ್ರಾಣಪತಿಪದದ್ವಂದ್ವ ಪಂಕಜಾಸಕ್ತ ಮಾನಸ |
ಶಮಾದಿಗುಣ ಸಂಯುಕ್ತಂ ಶ್ರೀ ಪ್ರಾಣೇಶಗುರುಂ ಭಜೆ ||
ಕರವ ಮುಗಿದು ನಿಮ್ಮ ಮಹಿಮೆ| ಕೊಂಡಾಡುವೆ ದಾಸರಾಯ|
ಹರಿದಾಸರ ಪ್ರಿಯ ನಮೊ ನಮೋ| ಪ್ರಾಣೇಶದಾಸರಾಯ||

ಆ ಹದಿನಾಲ್ಕು ಪ್ರತಿಮೆಗಳು ಇವಾಗಲು ಕಸಬಾ ಲಿಂಗಸೂಗುರು ಶ್ರೀ ದಾಸರ ಮನೆಯಲ್ಲಿ ಅವರ ವಂಶಸ್ಥರ ಬಳಿ ಇವೆ.
ಇವರು ಸಹ ಅನೇಕ ಮಹಿಮೆಯನ್ನು ಭಗವಂತನ ಕೃಪೆ ಇಂದ ತೋರಿದ್ದಾರೆ ಎನ್ನುವದು ಹಿರಿಯರ ಹೇಳಿಕೆ ಇಂದ ತಿಳಿಯುತ್ತದೆ.
ಪ್ರತಿ ವರುಷದಂತೆ ಶ್ರೀ ಜಗನ್ನಾಥ ದಾಸರು ತಮ್ಮ ತಂದೆಯ ಪಿತೃ ಕಾರ್ಯ ಕ್ಕೆ ಇವರನ್ನು ಆಹ್ವಾನ ಮಾಡಿದ್ದಾರೆ.
ಮಧ್ಯಾಹ್ನದ ಸಮಯ ಹನ್ನೆರಡು ಆದರು ಇನ್ನೂ ಲಿಂಗಸೂಗುರುನಲ್ಲಿ ಇದ್ದಾರೆ. ಆಗ ಮನೆಯವರು ಇದೇನು? ಸ್ವಾಮಿ.!. ನೀವು ಇಷ್ಟು ಹೊತ್ತು ಆದರು ಇನ್ನೂ ಇಲ್ಲಿ ಇದ್ದೀರಿ.ಮಾನ್ವಿಗೆ ಹೊರಟಿಲ್ಲ?? ಎಂದಾಗ ಅವರು ಸರಿ ..ಈಗಲೇ ಹೊರಟೆ ಎಂದು ಕ್ಷಣ ಮಾತ್ರದಲ್ಲಿ ಕಾಲಕ್ಕೆ ಸರಿಯಾಗಿ ತಮ್ಮ ಯೋಗ ಸಾಮರ್ಥ ದಿಂದ ಇರುತ್ತಾ ಇದ್ದರೆಂದು ಹಿರಿಯರ ಹೇಳಿಕೆ.
ಇವರ ಪಾದತಲ ಶ್ವೇತವು ದೋಷವಲ್ಲವೆಂದು ಇದು ಇವರ ಸತ್ಪಾತ್ರತೆಗೆ ಪ್ರತಿಬಂಧಕವಾಗಿಲ್ಲವೆಂದು ಶ್ರೀ ಮಾನವಿ ಪ್ರಭುಗಳು ತಮ್ಮ ತಂದೆಯವರ ಪಿತೃ ಕಾರ್ಯಕ್ರಮ ಕ್ಕೆ ಇವರನ್ನು ಆಹ್ವಾನ ಮಾಡುತ್ತಾ ಇದ್ದರು.
ಶ್ರೀ ಪ್ರಾಣೇಶದಾಸರಿಂದ ಪ್ರತಿಷ್ಠಿತ ಗೊಂಡ ಶ್ರೀ ವರದೇಂದ್ರ ರಾಯರ ವೃಂದಾವನ ಚರಿತ್ರೆ..

ಶ್ರೀ ಮದ್ರಾಘವೇಂದ್ರ ತೀರ್ಥ ಗುರುಗಳ ಮಠದ ಪರಂಪರೆಯಲ್ಲಿ ಬಂದ ಶ್ರೀ ವರದೇಂದ್ರ ತೀರ್ಥ ಗುರುಗಳು ಲೋಕ ಹಾಗು ಭಕ್ತರ ಉದ್ದಾರಕ್ಕೆ ಸಂಚಾರ ಮಾಡುತ್ತಾ ಲಿಂಗಸೂಗುರು ಗ್ರಾಮಕ್ಕೆ ಆಗಮಿಸುತ್ತಾರೆ. ಅವಾಗ ಶ್ರೀ ಪ್ರಾಣೇಶದಾಸರ ಆತಿಥ್ಯವನ್ನು ಸ್ವೀಕರಿಸಿ ಅವರನ್ನು ಮತ್ತು ಅವರ ಕುಲವನ್ನು ಉದ್ದಾರ ಮಾಡಲೋಸುಗವಾಗಿ ಅವರಿಂದ ಬಣವಿ ದೊಡ್ಡಿಯನ್ನು ಶ್ರೀ ಕೃಷ್ಣಾರ್ಪಣಮಸ್ತು ಎಂದು ತೆಗೆದುಕೊಂಡು ಅದನ್ನು ನಾವು ಕೇಳಿದಾಗ ಅದನ್ನು ಕೊಡಬೇಕು ಎಂದು ಹೇಳಿ ಮುಂದೆ ಸಂಚಾರಕ್ಕೆ ಹೊರಡುತ್ತಾರೆ.
ನಂತರ ಪುಣೆ ಯಲ್ಲಿ ಆಷಾಡ ಶುಕ್ಲ ಷಷ್ಠಿ ತಮ್ಮ ದೇಹವನ್ನು ತ್ಯಜಿಸಿ ವೈಕುಂಠ ಯಾತ್ರೆ ಮಾಡುತ್ತಾರೆ
ನಂತರ ಕೆಲ ಕಾಲದಲ್ಲಿ ದಾಸರ ಸ್ವಪ್ನದಲ್ಲಿ ಶ್ರೀ ವರದೇಂದ್ರ ತೀರ್ಥ ಗುರುಗಳು ಬಂದು “ನಾನು ನೀವು ಕೊಟ್ಟ ಜಾಗದಲ್ಲಿ ಬಂದು ಇರಲು ನಿರ್ಧಾರ ಮಾಡಿದ್ದೇನೆ.ಅದಕ್ಕೆ ನಿದರ್ಶನ ವಾಗಿ ಬಣವಿ ದೊಡ್ಡಿಯ ಒಳಗೆ ತುಲಸಿ ವೃಕ್ಷ ರೂಪದಲ್ಲಿ ಬಂದಿದ್ದೇನೆ.ಅಲ್ಲಿ ವೃಂದಾವನ ಪ್ರತಿಷ್ಠಿತ ಮಾಡಿರಿ.ಕೆಲಕಾಲದಲ್ಲಿ ಪುಣೆ ಇಂದ ನನ್ನ ಮೂಲ‌ಪಾದುಕೆಗಳನ್ನು ಇಲ್ಲಿ ಕಳುಹಿಸುವ ದಕ್ಕೆ ಅರ್ಚಕರಿಗೆ ಸೂಚನೆ ಕೊಟ್ಟಿದ್ದೇನೆ.ಅದನ್ನು ವೃಂದಾವನ ಮುಂದೆ ಇಟ್ಟು ಪೂಜಿಸಿ ಎಂದು ಆಜ್ಞೆಯನ್ನು ಮಾಡುತ್ತಾರೆ.. ಶ್ರೀ ಗಳ ಆಜ್ಞೆಯನ್ನುಪರಿ ಪಾಲಿಸಲೋಸುಗ ಬಣವಿ ತೆಗೆದು ನೋಡಲಾಗಿ ಒಬ್ಬ ಪುರುಷ ಪ್ರಮಾಣದ ಪ್ರಪುಲ್ಲಿತವಾಗಿ ಸೊಂಪಾಗಿ ಬೆಳೆದ ತುಲಸಿ ವೃಕ್ಷ ವನ್ನು ನೋಡಿ ಸರ್ವರು ಆಶ್ಚರ್ಯಕರ ವಾದರು.ನಂತರ ಗುರುಗಳ ಮಹಿಮೆಯನ್ನು ಕೊಂಡಾಡಿ ಕೆಲಕಾಲ ಆ ತುಲಸಿ ವೃಕ್ಷ ವನ್ನು ಪೂಜಿಸಿ ಅಲ್ಲಿ ವೃಂದಾವನ ವನ್ನು ಸ್ಥಾಪಿಸಿದರು. ಅತ್ತ ಪುಣೆಯಲ್ಲಿ ಇದ್ದ ಅರ್ಚಕರಿಗೆ ತಮ್ಮ ಪಾದುಕೆಗಳನ್ನು ಮಂತ್ರಾಕ್ಷತೆ ಸಮೇತವಾಗಿ ತೆಗೆದು ಕೊಂಡು ಹೋಗಿ ಲಿಂಗಸೂಗುರು ನಲ್ಲಿ ಇರುವ ತಮ್ಮ ವೃಂದಾವನ ದ ಹತ್ತಿರ ಇಡಲು ಗುರುಗಳ ಸೂಚನೆ ಆಗುತ್ತದೆ. ಅದರಂತೆ ಅರ್ಚಕರು ಬಹು ಸಂಭ್ರಮದಿಂದ ತೆಗೆದುಕೊಂಡು ಬರುತ್ತಾರೆ. ಇಂದಿಗೂ ಅವು ಶ್ರೀ ವರದೇಂದ್ರ ತೀರ್ಥ ಗುರುಗಳ ವೃಂದಾವನ ಸನ್ನಿಧಿ ಯಲ್ಲಿ ಇವೆ. ಇವಾಗಲು ಸಹ ನೋಡಬಹುದು. ಪ್ರತಿ ವರುಷ ಆಷಾಡ ಶುದ್ದ ಷಷ್ಠಿ ಬಹು ವೈಭವದಿಂದ ಗುರುಗಳ ಆರಾಧನ ,ಪ್ರತಿ ಗುರುವಾರ ಪಲ್ಲಕ್ಕಿ ಸೇವೆ ಮತ್ತು ನಿತ್ಯ ದಲ್ಲಿ ಅನೇಕ ಸೇವೆ ಅಲ್ಲಿ ಇವಾಗಲು ಬಹಳ ವಿಜೃಂಭಣೆಯಿಂದ ನಡೆಯುತ್ತಾ ಇವೆ. ಪಾಮರ ಜನರಿಗೆ ಈ ಭಾಗ್ಯ ದೊರಕುವದೇ..ಬಂದು ಬೇಡಿದವರಿಗೆ ವರವನ್ನು ಕೊಡಲು ಶ್ರೀ ವರದೇಂದ್ರ ಗುರುಗಳು ಬಂದು ಕುಳಿತಿರುವದು ಶ್ರೀ ದಾಸರ ಪುಣ್ಯ ವೇ ಸರಿ. ಇಂದು ಇದು ಬಹು ದೊಡ್ಡ ಪುಣ್ಯ ಕ್ಷೇತ್ರ ವಾಗಿ ಪ್ರಸಿದ್ಧಿ ಯಾಗಿ ಬೇಡಿದವರಿಗೆ ಬರಿಕೈಯಲ್ಲಿ ಹೋದದ್ದು ಇಲ್ಲ. ಗುರುಗಳ ಮತ್ತು ದಾಸರ ಅನುಗ್ರಹ ಪಡೆಯಲು ಒಮ್ಮೆ ಯಾದರೂ ಇಲ್ಲಿ ಬರಲೇಬೇಕು. ಶ್ರೀ ವರದೇಂದ್ರ ತೀರ್ಥ ಗುರುಗಳು ಲಿಂಗಸೂಗುರು ನಲ್ಲಿ ಬಂದು ವಾಸಮಾಡಿದ ಮೇಲೆ ಶ್ರೀ ಪ್ರಾಣೇಶದಾಸರು ಗುರುಗಳ ಸೇವೆ ಮಾಡುತ್ತಾ ಸದಾ ಹರಿ ಸ್ಮರಣೆ ಮಾಡುತ್ತಾ ಹರಿಕೀರ್ತನೆ ಪಾಡುತ್ತಾ ಶಿಷ್ಟ ಜನರಿಗೆ ಜ್ಞಾನ ಉಪದೇಶವನ್ನು ಮಾಡಿ ಅವರನ್ನು ಉದ್ದಾರ ಮಾಡಿ ಶಾಶ್ವತವಾದ ಸತ್ಕೀರ್ತಿಯನ್ನು ಸಂಪಾದಿಸಿ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡು ಶಾಲಿವಾಹನ ಶಕ ೧೭೪೪ನೇ ಚಿತ್ರ ಭಾನು ನಾಮ ಸಂವತ್ಸರ ಆಶ್ವೀಜ ಶುದ್ಧ ಸಪ್ತಮಿ ಈ ದಿವಸ ಈ ನರಲೋಕವನ್ನು ಬಿಟ್ಟು ಶ್ರೀ ಹರಿ ನಾಮ ಉಚ್ಚಾರಣೆ ಮಾಡುತ್ತಾ ಶಾಶ್ವತವಾದ ಭಗವಂತನ ಪುರವನ್ನು ಸೇರಿದರು. ಇದನ್ನು ಅವರ ಮಕ್ಕಳು ಮತ್ತು ಶಿಷ್ಯರು ಆದ ಶ್ರೀ ಗುರು ಪ್ರಾಣೇಶದಾಸರ ತಮ್ಮ ಕೃತಿ ಯಲ್ಲಿ “ತೆರಳಿದರು ಪರಮ ತೋಷದಲಿ ಹರಿಪುರಕೆ ಎಂದು ವರ್ಣನೆ ಮಾಡಿದ್ದಾರೆ. ಇಂತಹ ಭಗವಂತನ ಭಕ್ತರ ಚರಿತ್ರೆ ಪಾರಾಯಣ ಶ್ರವಣ ಮಾಡಿದರೆ ನಮ್ಮ ಜೀವನ ಧನ್ಯ. ಶ್ರೀ ಪ್ರಾಣೇಶದಾಸರ ಅಂತರ್ಯಾಮಿಯಾದ ಶ್ರೀ ಭಾರತಿಪತಿಮುಖ್ಯಪ್ರಾಣನ ಅಂತರ್ಯಾಮಿಯಾದ ಶ್ರೀ ಪ್ರಾಣೇಶವಿಠ್ಠಲನ ಅನುಗ್ರಹ ಸದಾ ನಮ್ಮ ಎಲ್ಲರ ಮೇಲಿರಲಿ ಎಂದು ಪ್ರಾರ್ಥನೆ ಮಾಡುತ್ತಾ ನನ್ನ ಈ ಲೇಖನ ಪುಷ್ಪ ವನ್ನು ದಾಸರಾಯರ ಪಾದಕ್ಕೆ ಸಮರ್ಪಣೆ ಮಾಡುತ್ತಾ
ಶ್ರೀ ಕೃಷ್ಣಾರ್ಪಣಮಸ್ತು

ಪ್ರಾಣೇಶದಾಸಾರ್ಯರ ಭಜಿಪರಿಗೆ|ಏನೇನೂ ಭಯವಿಲ್ಲವು|| ಸಾನುರಾಗದಲಿಂದ ಜ್ಞಾನ ಭಕುತಿ ಇತ್ತು|ಶ್ರೀನಿವಾಸ ನ ಪದ ಕಾಣಿಸುವರು ನಿತ್ಯ||

ಸಂಗ್ರಹ..ಲಿಂಗಸೂಗುರು ಪ್ರಾಂತ್ಯದ ಹಿರಿಯರಿಂದ ಕೇಳಿದ್ದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: