ಶ್ರೀ ಸುಮತೀಂದ್ರ ತೀರ್ಥರ ಹಾಗು ಹೆಳವನಕಟ್ಟೆ ಗಿರಿಯಮ್ಮನವರ ಸಂದರುಶನ

Purusha Sukta – 13
November 9, 2020
Purusha Sukta – 14
November 16, 2020

ಶ್ರೀ ಸುಮತೀಂದ್ರ ತೀರ್ಥರ ಹಾಗು ಹೆಳವನಕಟ್ಟೆ ಗಿರಿಯಮ್ಮನವರ ಸಂದರುಶನ

ಭಕ್ತಿ ಪಂಥದ ಚಳುವಳಿಯಲ್ಲಿ ದಾಸ ಸಾಹಿತ್ಯದ ಅಪಾರವಾದ ಕೊಡುಗೆ ಇದೆ. ಜನರಲ್ಲಿ ಭಕ್ತಿ ಮೂಡಿಸಿವುದರ ಜೊತೆಗೆ ಮಧ್ವ ಸಿದ್ಧಾಂತದ ಅರಿವನ್ನು ಮೂಡಿಸಿರುವುದು ದಾಸ ಸಾಹಿತ್ಯದ ಮತ್ತೊಂದು ವಿಶೇಷ ಕೊಡುಗೆ.ದಾಸ ಸಾಹಿತ್ಯವನ್ನು ಇನ್ನೂ ಬಲಿಷ್ಠಗೊಳಿಸಲು ನಮ್ಮ ಮಾಧ್ವ ಯತಿಗಳು ಅದರ ಬುನಾದಿಯಂತೆ ಇದ್ದು ಆಯಾ ಕಾಲದ ಹರಿದಾಸರಿಗೆ ಅನುಗ್ರಹಿಸಿ ಅವರ ಬೆಂಬಲಕ್ಕೆ ಸದಾ ಇರುತ್ತಿದ್ದರು. ತಮ್ಮ ಜೀವನದ ಪ್ರತಿ ಕ್ಷಣ ಶ್ರೀಹರಿಯ ಧ್ಯಾನ ಮಾಡುತ್ತ, ತಮ್ಮ ಎಲ್ಲಾ ದಿನನಿತ್ಯ ಕಾರ್ಯಗಳು ಶ್ರೀಹರಿಯ ಸೇವೆಯೆಂದು ಭಾವಿಸುತ್ತಾ, ಅವರ ಸಂಗೀತ ಸಾಹಿತ್ಯದಿಂದ ಲೋಕ ಪಾಲಕನಾದ ನಾರಾಯಣನನ್ನು ಕುಣಿಸುತ್ತ, ಒಲಿಸಿಕೊಳುತ್ತ ತಮ್ಮ ಜೀವನವೇ ಸಾರ್ಥಕವಾಗಿಸಿಕೊಂಡವರು ನಮ್ಮ ಹರಿದಾಸರು.

ಅಂತಹ ದಾಸವರೇಣ್ಯರಲ್ಲಿ ಕೇವಲ ಇಬ್ಬರು ಹೆಂಗಸರು ಪ್ರಖ್ಯಾತರಾದವರು, ಹರಪನಹಳ್ಳಿ ಭೀಮವ್ವ ಮತ್ತು ಹೆಳವನಕಟ್ಟೆ ಗಿರಿಯಮ್ಮ.
ಹೆಳವನಕಟ್ಟೆ ಗಿರಿಯಮ್ಮನವರು ಸುಮತೀಂದ್ರ ತೀರ್ಥರ ಹಾಗು ಗೋಪಾಲದಾಸರ ಅನುಗ್ರಹಕ್ಕೆ ಪಾತ್ರರಾಗಿದ್ದರು.
ಗೋಪಾಲದಾಸರು ಗಿರಿಯಮ್ಮನವರಿಗೆ, ಹೆಳವನಕಟ್ಟೆ ರಂಗ ಎಂದು ಅಂಕಿತವಿತ್ತು ಅದರ ಜೊತೆಗೆ ವೇಣುಗೋಪಾಲನ ಮೂರ್ತಿಯನ್ನು ಕೊಟ್ಟು ಅನುಗ್ರಹಿಸಿದರು.

ಗಿರಿಯಮ್ಮನವರು  ಕೊಮಾರನ ಹಳ್ಳಿಯ  ಲಕ್ಷ್ಮೀ ರಂಗನಾಥ ಸ್ವಾಮಿಯನ್ನು ದಿನನಿತ್ಯ ಆರಾಧಿಸಿ ಮತ್ತು ರಂಗನಾಥನ ಮೇಲೆ ಕೀರ್ತನೆಗಳನ್ನು ಬರೆಯುತ್ತಿದರು.
ಹೀಗೆ ಒಂದು ದಿನ ಸುಮತೀಂದ್ರ ತೀರ್ಥರು ಮಲೇಬೆನ್ನೂರಿಗೆ ಬಂದರು. ಅವರನ್ನು ಕಾಣಲು ಗಿರಿಯಮ್ಮನವರು ಹೋದಾಗ, ಸಂಪ್ರದಾಯಸ್ಥರು ಈಕೆ ಬಂಜೆಯೆಂದು ಜರಿದು ಸ್ವಾಮಿಗಳ ದರ್ಶನವಾಗದಂತೆ ನಿರ್ಬಂಧ ಮಾಡಿದರು.
ಇದನ್ನರಿತ ಮಹಾ ಜ್ಞಾನಿಗಳಾದ ಸುಮತೀಂದ್ರ ತೀರ್ಥರು ಗಿರಿಯಮ್ಮನನ್ನು ಕರೆಸಿದರು. ಗಿರಿಯಮ್ಮನವರು ಸುಮತೀಂದ್ರರಿಗೆ ನಮಸ್ಕರಿಸಿ ತೀರ್ಥಕ್ಕೆ ಕೈ ಚಾಚಿದರು.
ಸುಮತೀಂದ್ರರು ತೀರ್ಥವನ್ನು ಕೊಡುವಾಗ ಗಿರಿಯಮ್ಮನವರ ಕೈಗಳನ್ನು ಕಂಡು, ಯಾರು ನಿನಗೆ ಬಂಜೆಯೆಂದರು? ನಿನ್ನ ಕೈಗಳು ಜಗದ್ರಕ್ಷಕನಾದ ಕೃಷ್ಣನನ್ನು ಆಡಿಸಿದ ಯಶೋಧೆಯ ಕೈಗೆ ಹೋಲುತ್ತಿದೆ, ಸಾಕ್ಷಾತ್ ಶ್ರೀ ಕೃಷ್ಣನೇ ನಿನ್ನ ಮಗನೆಂದು ಹೇಳಿ ಅನುಗ್ರಹಿಸಿದರು.

ಗಿರಿಯಮ್ಮನವರು ಎಂದಿನಂತೆ ಗೋಪಾಲದಾಸರು ತಮಗೆ ಕೊಟ್ಟ ಬಾಲ ವೇಣುಗೋಪಾಲ ಮೂರ್ತಿಯ ಮುಂದೆ ರಂಗವಲ್ಲಿಯನ್ನು ಹಾಕುತ್ತಾ, ಮಧುರವಾದ ಧ್ವನಿಯಿಂದ ಹಾಡುತ್ತಾ ಮೂರ್ತಿಯನ್ನು ಅರ್ಚಿಸುತಿದ್ದರು. ಗಿರಿಯಮ್ಮನ ಹಾಡಿಗೆ ಆ ಬಾಲ ವೇಣುಗೋಪಾಲ ಮೂರ್ತಿ ಪ್ರತ್ಯಕ್ಷವಾಗಿ ಕೊಳಲನೂದುತ ತನ್ನ ಗೆಜ್ಜೆಯ ನಾದದಿಂದ ಕುಣಿಯುತ್ತಿರುವುದನ್ನು ಸಮೀಪದಲ್ಲೇ ಇದ್ದ ಸುಮತೀಂದ್ರ ತೀರ್ಥರು ಇದನ್ನು ಕಂಡರು. ಆಗ ಗಿರಿಯಮ್ಮ ಆ ಬಾಲ ಗೋಪಾಲನನ್ನು ಎತ್ತಿಕೊಂಡು ಸುಮತೀಂದ್ರರ ಹತ್ತಿರ ತಂದು ನಿಲ್ಲಿಸಿ ಗುರುಗಳೇ ಈ ಮಗುವಿಗೆ ಮಂತ್ರಾಕ್ಷತೆಯನ್ನು ನೀಡಿ ಎಂದು ಕೇಳಿಕೊಂಡಳು. ಸುಮತೀಂದ್ರ ತೀರ್ಥರು ಭಕ್ತಿಯಿಂದ ವೇಣುಗೋಪಾಲನನ್ನು ನಮಸ್ಕರಿಸಿ ನಿಂತರು.
ಹ್ಯಾಗೆ ಕನಕದಾಸರು ವ್ಯಾಸರಾಯರುಗೇ, ವೈಕುಂಠ ದಾಸರು ವಾದಿರಾಜರಿಗೇ ಪರಮಾತ್ಮನನ್ನು ತೋರಿಸಿದರೋ  ಹಾಗೇ ನಿನ್ನಿಂದ ನನಗೆ ಶ್ರೀಕೃಷ್ಣ ಪರಮಾತ್ಮನ ದರ್ಶನವಾಯಿತು ತಾಯಿ, ನೀನು ಯಶೋಧ, ನೀನು ಕೌಸಲ್ಯ, ನೀನು  ಅನಸೂಯಾ ಎಂದು ಧನ್ಯತಾ ಭಾವದಿಂದ ಹೇಳಿ ಹೊಗಳಿದರು. ಆಗ ಗಿರಿಯಮ್ಮ ಸುಮತೀಂದ್ರರಿಗೆ ಈತನೇ ನೋಡಿ ನಿಮ್ಮ ಮೂಲ ರಾಮ ಎಂದು ತೋರಿಸಿ ಈ ಕೃತಿಯನ್ನು ಬರೆದಳು.
“ರಾಮ ಶ್ರೀ ರಘುನಂದನ ಶರಣು ಸಾರ್ವ-
ಭೌಮ ಭೂಸುರವಂದ್ಯ
ಸೋಮಶೇಖರಮಿತ್ರ ಕಾಮಿತ ಫಲದಾತ್ರ
ಕಾಮಧೇನು ವಿಶ್ವಭೀಮ ಸನ್ನುತ ಸೀತಾ ||ಪ||.
ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ-
ಭಾರಹರ ಭಜಕಜನೋದ್ಧಾರ ವೇದಾಂತಸಾರ|
ಚಾರುವದನ ಮಣಿಹಾರ ಕುಂಡಲಧರ
ವೀರರಾಘವ ವಿಶ್ವಾಧಾರ ಕರುಣಿಸು ಸೀತಾ||
ಪಾಪರಹಿತ ಪಾವನ ಚರಿತ ಅಹಲ್ಯಾ
ಶಾಪ ಹರಣ ದಿವ್ಯರೂಪ ರಮಾರಮಣ|
ತಾಪ ವಿಚ್ಛೇದನ ತಾಮಸ ಗುಣಹರಣ ದ-
ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ||
ಮದನಕೋಟಿ ಮೋಹನಾಂಗ ಮಾಧವ ಪುಣ್ಯಚರಿತ
ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ|
ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ
ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ||”

ಮರುದಿನ ಸುಮತೀಂದ್ರರು ಸುದರ್ಶನ ಹೋಮವನ್ನು ಮಾಡಿ, ಎಲ್ಲಾ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡುತಿದ್ದರು.
ಆಗ ಗಿರಿಯಮ್ಮನ ಸರದಿ ಬಂದಾಗ ಸುಮತೀಂದ್ರರು ಆಕೆ ಚಾಚಿದ ಕೈಗಳನ್ನು ಗಮನಿಸಿ ಸಾಕ್ಷಾತ್ ಶ್ರೀಹರಿಯೇ ಆಕೆಗೆ ಚಕ್ರಾಂಕನ ಮಾಡಿದ್ದಾನೆ ಆದರಿಂದ ತಮಗೆ ಮುದ್ರೆ ಹಾಕುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಈ ಕೈಗಳನ್ನು ನೋಡಿದವರೇ ಪುಣ್ಯವಂತರು ಎಂದು ಹೇಳಿದರು.
ಸಾಕ್ಷಾತ್ ಬಾಲ ಗೋಪಾಲನ ನೃತ್ಯವನ್ನು ಕಂಡ ಸುಮತೀಂದ್ರರ ತೀರ್ಥರ ಆರಾಧನೆಯ ಪರ್ವಕಾಲದಲ್ಲಿ ಅವರ ಸ್ಮರಿಸಿ ಧನ್ಯರಾಗೋಣ.

ಪೂರ್ಣಪ್ರಜ್ಞಮತಾಂಭೋಧಿ ಪೂರ್ಣೇಂದುಮಕಲಂಕಿನಂ |
ಸುಜನಾಂಬುಧಿಭಾಸ್ವಂತಂ ಸುಮತೀಂದ್ರಗುರುಂ ಭಜೇ |

      ||ಮಧ್ವಾನ್ತರ್ಗತ ಶ್ರೀಕೃಷ್ಣಾರ್ಪಣಮಸ್ತು||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: