SRSMATHA, Mantralayam
Appeal to all the Devotees and Disciples of SRS Mutt - Mantralayam
ಭಕ್ತ ಮಹಾಶಯರಲ್ಲಿ ವಿಜ್ಞಾಪನೆ:-
ಕಲಿಯುಗ ಕಾಮಧೇನು ಕಲ್ಪವೃಕ್ಷ ಎಂದು ಪ್ರಸಿದ್ಧರಾದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರು ನೆಲೆಸಿರುವ ಪವಿತ್ರ ತುಂಗಭದ್ರಾ ನದಿ ತಟದಲ್ಲಿ ಇರುವ ಮಂತ್ರಾಲಯ ಶ್ರೀ ಕ್ಷೇತ್ರವು ಪುರಾಣ ಕಾಲದಿಂದಲೂ ಪ್ರಸಿದ್ಧವಾದ ಸ್ಥಳ. ಈ ಪುಣ್ಯಭೂಮಿ ಕೃತಯುಗ ದಲ್ಲಿ ಪರಮ ಭಗವತೋತ್ತಮರಾದ, ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರಥಮ ಅವತಾರವಾದ ಪ್ರಹ್ಲಾದರಾಜರು ಯಜ್ಞ ಮಾಡಿದ, ತ್ರೇತಾ ಯುಗದಲ್ಲಿ ಶ್ರೀ ಸೀತಾ ರಾಮಚಂದ್ರರು ವನವಾಸ ಕಾಲದಲ್ಲಿ ತಮ್ಮ ಪಾದಸ್ಪರ್ಶದಿಂದ, ದ್ವಾಪರದಲ್ಲಿ ಶ್ರೀ ಕೃಷ್ಣಾರ್ಜುನರು ನಡೆದಾಡಿದ ಪರಮ ಪವಿತ್ರ ಕ್ಷೇತ್ರ. ಹಾಗೆಂದೇ ಶ್ರೀರಾಘವೇಂದ್ರ ಗುರುಸಾರ್ವಭೌಮರು ತಮ್ಮ ಸಶರೀರ ಬೃಂದಾವನ ಪ್ರವೇಶಕ್ಕೆ ಆಯ್ದುಕೊಂಡು, ತಮ್ಮ ತಪಃ ಸಂಪತ್ತನ್ನು ಭಕ್ರಜನರ ಉದ್ಧಾರಕ್ಕಾಗಿ ಧಾರೆಯೆರೆಯತ್ತಿದ್ದಾರೆ. ನಂತರದಲ್ಲಿ, ವಿಜಯದಾಸರೇ ಮೊದಲಾದ ಅಪರೋಕ್ಷ ಜ್ಞಾನಿಗಳು ಸಂಚರಿಸಿದ ಪುಣ್ಯನೆಲ.
ಇಂತಹ ಅದ್ಭುತವಾದ ಪೌರಾಣಿಕ, ಧಾರ್ಮಿಕ, ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿರುವ ಮಂತ್ರಾಲಯ ಶ್ರೀ ಕ್ಷೇತ್ರದಲ್ಲಿ, ಶ್ರೀ ರಾಘವೇಂದ್ರ ಸ್ವಾಮಿ ಮಠ ದ ಪ್ರಸ್ತುತ ಪೀಠಾಪಧಿತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಬುಧೆಂದ್ರತಿರ್ಥ ಶ್ರೀಪಾದಂಗಳವರ, ನಮ್ಮ ಸನಾತನ ವೈದಿಕ ಭಾರತೀಯ ಸಂಪ್ರದಾಯವನ್ನು ಪರಿರಕ್ಷಿಸಿ ಅದರ ಸದುಪಯೋಗ ಮುಂದಿನ ಪೀಳಿಗೆಗೂ ಲಭ್ಯವಾಗಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ, ಈಗಾಗಲೇ ಬಹುಕೋಟಿ ರೂಪಾಯಿಗಳ ವೆಚ್ಚದಲ್ಲಿ, ಭಾರತೀಯ ಸಂಸ್ಕೃತಿ ಸಂಪ್ರದಾಯಗಳನ್ನು ಪರಿಚಯಿಸುವ ಅತ್ಯಮೂಲ್ಯ ಮಾಹಿತಿಯನ್ನ ಹೊಂದಿರುವ ಸಂಗ್ರಹಾಲಯವನ್ನು ಶ್ರೀ ಮಠದ ಆವರಣದಲ್ಲಿ ಪ್ರಾರಂಭಿಸಿದ್ದಾರೆ.
ಪ್ರಕೃತ, ಇದನ್ನು ಮತ್ತಷ್ಟು ಶ್ರೀಮಂತ ಗೊಳಿಸುವ ಸಂಕಲ್ಪದಿಂದ, ಭಕ್ತರು, ಶಿಷ್ಯರ ಬಳಿ ಇರಬಹುದಾದ ಪ್ರಾಚೀನ ತಾಳವಾಲೆ, ಸಾಹಿತ್ಯ, ವಿಗ್ರಹಗಳು ಇತ್ಯಾದಿ ಗಳನ್ನು ಸಂಗ್ರಹಿಸಿ, ಈ ಸಂಗ್ರಹಾಲಯದಲ್ಲಿ ಸಂರಕ್ಷಿಸಿ, ಅದರ ಉಪಯೋಗವನ್ನು ಭಕ್ತರಿಗೆ ದೊರಕಿಸಿಕೊಡುವ ಉದ್ದೇಶವನ್ನು ಹೊಂದಿದ್ದಾರೆ.
ಆದಕಾರಣ, ಸದ್ಭಕ್ತರು ಈ ಪವಿತ್ರ ಕಾರ್ಯದಲ್ಲಿ ಕೈಜೋಡಿಸಿ, ತಮ್ಮಲ್ಲಿರುವ ಪ್ರಾಚೀನ ವಸ್ತುಗಳನ್ನು ಶ್ರೀ ಮಠಕ್ಕೇ ಒಪ್ಪಿಸುವುದರ ಮೂಲಕ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೇ ಪಾತ್ರರಾಗುವುದರ ಜೊತೆಗೆ, ನಮ್ಮ ಸನಾತನ ಸಂಸ್ಕೃತಿ ಸಂಪ್ರದಾಯಗಳನ್ನು ಪರಿರಕ್ಷಿಸುವ ಈ ಮಹತ್ಕಾರ್ಯದಲ್ಲಿ ಭಾಗಿಗಳಾಗಬೇಕಾಗಿ ಕೋರಲಾಗಿದೆ.
ವಸ್ತುಗಳನ್ನು ಕೊಟ್ಟ ಎಲ್ಲ ದಾನಿಗಳಿಗೂ ಶ್ರೀಗಳಿಂದ ಅನುಗ್ರಹ ಪೂರ್ವಕ ಫಲ ಮಂತ್ರಾಕ್ಷತೆ ಜೊತೆ, ಶ್ರೀ ಮಠದಿಂದ ಪ್ರಮಾಣ ಪತ್ರವನ್ನು ಕೊಡಲಾಗುವುದು.
<-
X